ನಂಜಪ್ಪ ಲೈಫ್‌ಕೇರ್‌ನಲ್ಲಿ ಏರ್ಪಡಿಸಿದ್ದ ವಿಶ್ವ ರೇಬಿಸ್ ಹಾಗೂ ವಿಶ್ವ ಹೃದಯ ದಿನವನ್ನು ಡಿಎಚ್‌ಒ ಡಾ. ನಟರಾಜ್ ಉದ್ಘಾಟಿಸಿದರು. ಡಾ. ತಿಮ್ಮಪ್ಪ, ಡಾ. ಎಸ್.ಶ್ರೀಧರ್, ಡಾ. ಒ.ಮಲ್ಲಪ್ಪ. ಡಾ. ನಾಗರಾಜ ನಾಯ್ಕ, ಡಾ. ಸಿದ್ದನಗೌಡ ಪಾಟೀಲ್ ಇತರರಿದ್ದರು. 
ನ್ಯೂಸ್

ನಾಯಿ, ಬೆಕ್ಕು ಪರಚಿದರೂ ರೇಬಿಸ್ ಲಸಿಕೆ ಕಡ್ಡಾಯ

ಶಿವಮೊಗ್ಗ: ರೇಬಿಸ್ ಬಂದರೆ ಸಾವು ಖಚಿತ. ಆದ್ದರಿಂದ ಎಲ್ಲರೂ ನಾಯಿ ಮತ್ತು ಇತರ ಪ್ರಾಣಿಗಳ ಕಡಿತದಿಂದ ದೂರವಿರಬೇಕು. ಕೇವಲ ಕಡಿತ ಮಾತ್ರವಲ್ಲ, ಪ್ರಾಣಿಗಳು ಪರಚಿದ್ದರೂ ರೇಬಿಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ್ಯಾಧಿಕಾರಿ ಡಾ. ನಟರಾಜ್ ತಿಳಿಸಿದರು.

ಜಿಲ್ಲಾಡಳಿತ, ನಂಜಪ್ಪ ಗ್ರೂಪ್ ಆಫ್ ಹಾಸ್ಟಿಟಲ್ ಮತ್ತು ಎಜುಕೇಷನ್ ಅಕಾಡೆಮಿಯಿಂದ ಮಂಗಳವಾರ ನಂಜಪ್ಪ ಲೈಫ್‌ಕೇರ್ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ವಿಶ್ವ ರೇಬಿಸ್ ದಿನ ಮತ್ತು ವಿಶ್ವ ಹೃದಯ ದಿನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಹುತೇಕ ಮಂದಿ ನಾಯಿ ಮತ್ತು ಇತರೆ ಪ್ರಾಣಿಗಳನ್ನು ಪ್ರೀತಿಸುತ್ತೇವೆ. ಅವೂ ನಮ್ಮನ್ನು ಪ್ರೀತಿಸುತ್ತವೆ. ಆದರೆ ಕೆಲವು ಪ್ರಾಣಿಗಳು ಅಪಾಯಕಾರಿಯೂ ಹೌದು ಎಂದರು.
ಸಾಕಿದ ನಾಯಿಗಳಿಗೆ ಮತ್ತು ಬೀದಿ ನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆಯನ್ನು ನಿಯಮಿತವಾಗಿ ಕೊಡಿಸಬೇಕು. ರೇಬಿಸ್ ಬಂದ ನಂತರ ಅದಕ್ಕೆ ಚಿಕಿತ್ಸೆಯಿಲ್ಲ. ಸಾವು ಖಚಿತ. ಆದ್ದರಿಂದ ಮುನ್ನೆಚ್ಚರಿಕೆ ಅಗತ್ಯ. ನಾಯಿ, ಬೆಕ್ಕು ಇತರೆ ಪ್ರಾಣಿಗಳು ಕಚ್ಚಿದರೆ, ಪರಚಿದರೆ ನಿರ್ಲಕ್ಷೃ ಮಾಡದೆ ಲಸಿಕೆ ಪಡೆಯಬೇಕು. ಇತ್ತೀಚೆಗೆ ಶಿಕಾರಿಪುರದಲ್ಲಿ ಹುಚ್ಚು ನಾಯಿಯೊಂದು 41 ಜನರಿಗೆ ಕಚ್ಚಿದೆ. ಅವರೆಲ್ಲರಿಗೂ ಲಸಿಕೆ ನೀಡಲಾಗಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 4 ಜನರು ನಾಯಿ ಕಡಿತದಿಂದ ಸಾವಿಗೀಡಾಗಿದ್ದಾರೆ ಎಂದು ತಿಳಿಸಿದರು.
ಹೃದಯದ ಆರೋಗ್ಯಕ್ಕಾಗಿ ಒತ್ತಡ ನಿರ್ವಹಣೆ ಮಾಡಬೇಕು. ನಿಯಮಿತವಾಗಿ ವ್ಯಾಯಾಮ, ಧ್ಯಾನ ಹಾಗೂ ಸಾಕಷ್ಟು ವಿಶ್ರಾಂತಿ ಅಗತ್ಯ. ಇತ್ತೀಚಿನ ದಿನಗಳಲ್ಲಿ ಯುವಜನರು ಹೃದಯಾಘಾತದಿಂದ ಮೃತಪಡುತ್ತಿರುವುದು ಕಳವಳಕಾರಿ ಎಂದರು.
ಮೆಗ್ಗಾನ್ ಬೋಧನಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಿದ್ದನಗೌಡ ಪಾಟೀಲ್ ಮಾತನಾಡಿ, ನಾಯಿ ಕಚ್ಚದಂತೆ ಮುನ್ನೆಚ್ಚರಿಕೆ ವಹಿಸಬೇಕು. ಬೆಕ್ಕು ಕಡಿತದಿಂದಲೂ ಇಬ್ಬರು ಮೃತಪಟ್ಟಿದ್ದಾರೆ. ಹೀಗಾಗಿ ರೇಬಿಸ್ ಬಗ್ಗೆ ಜನರು ಜಾಗೃತರಾಗಬೇಕು ಎಂದರು.
ಸಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ತಿಮ್ಮಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರಾಜ ನಾಯ್ಕ, ಐಎಂಎ ಜಿಲ್ಲಾಧ್ಯಕ್ಷ ಡಾ. ಎಸ್.ಶ್ರೀಧರ್ ಇದ್ದರು.