ನ್ಯೂಸ್

ಮೆಚ್ಚಿದ ಹುಡುಗಿಗಾಗಿ ಆಕೆಯ ಊರಿಗೆ ಹೋದ ಯುವಕನಿಂದ ನಡೆಯಿತು ಬೆಚ್ಚಿಬೀಳಿಸುವ ಕೃತ್ಯ!

ಕಡಪ: ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಪಾಗಲ್​ ಪ್ರೇಮಿಯೊಬ್ಬ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆತಂಕಕಾರಿ ಘಟನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಬಡವೇಲು ವಲಯದಲ್ಲಿ ನಡೆದಿದೆ.

ಬಡವೇಲು ವಲಯದ ಚಿಂತಲ ಚೆರುವು ಗ್ರಾಮದ ನಿವಾಸಿ ಸುಬ್ಬಯ್ಯರ 18 ವರ್ಷದ ಮಗಳು ಸಿರಿಷಾ, ಬ್ಯಾಡ್​ವೆಲ್​ ವೀರರೆಡ್ಡಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಚರಣ್​ ಎಂಬಾತ ಸಿರಿಷಾಳನ್ನು ಸದಾ ಹಿಂಬಾಲಿಸುತ್ತಾ ಪ್ರೀತಿ ಮಾಡುವಂತೆ ದುಂಬಾಲು ಬಿದಿದ್ದ. ಕರೊನಾ ಹಿನ್ನೆಲೆಯಲ್ಲಿ ಸಿರಿಷಾ ಸದ್ಯ ಮನೆಯಲ್ಲಿಯೇ ಉಳಿದಿದ್ದಳು.

ಹೀಗಿರುವಾಗ ಚರಣ್​, ಸಿರಿಷಾಳ ಗ್ರಾಮಕ್ಕೆ ತೆರಳಿ ಪ್ರೀತಿಸುವಂತೆ ಒತ್ತಾಯ ಮಾಡಿದ್ದ. ಆದರೆ, ಆಕೆ ತಿರಸ್ಕರಿಸಿದಾಗ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಆಕೆ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾಳೆ.

ಇದನ್ನು ನೋಡಿದ ಗ್ರಾಮಸ್ಥರು ಚರಣ್​ನನ್ನು ಹಿಡಿದು, ಮರಕ್ಕೆ ಕಟ್ಟಿ, ಚೆನ್ನಾಗಿ ಥಳಿಸಿದ್ದಾರೆ. ಬಳಿಕ ಆತ ಮೂರ್ಛೆ ಹೋದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪೊಲೀಸರು ಚರಣ್​ನನ್ನು ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)