ನ್ಯೂಸ್

ವಿಧಿಯೇ ನೀನೆಷ್ಟು ಕ್ರೂರಿ? ಮದ್ವೆಯಾದ 5 ವರ್ಷದ ಬಳಿಕ ಮಗು ಜನನ, ಕೆಲ ತಾಸಿನ ಮೊದಲೇ ತಂದೆ ದುರ್ಮರಣ

ತ್ರಿಸ್ಸೂರ್​: ವಿಧಿ ಎಷ್ಟು ಕ್ರೂರಿ ಎಂಬುದನ್ನು ಒಮ್ಮೊಮ್ಮೆ ನಡೆಯುವ ಹೃದಯ ವಿದ್ರಾವಕ ಘಟನೆಗಳು ನೆನಪು ಮಾಡುತ್ತವೆ. ಅಂಥದ್ದೇ ಒಂದು ಘಟನೆ ಇದೀಗ ಕೇರಳದ ತ್ರಿಸ್ಸೂರ್​ನಲ್ಲಿ ನಡೆದಿದೆ. ಇನ್ನೇನು ತನ್ನ ಮಗು ಹೊರ ಜಗತ್ತಿಗೆ ಕಾಲಿಡಬೇಕು ಎನ್ನುವಷ್ಟರಲ್ಲಿ ತಂದೆಯ ಜೀವನ ದುರಂತ ಅಂತ್ಯವಾಗಿದೆ.

ಮೃತನ ಹೆಸರು ಶರತ್​ (30). ಈತ ಪಶ್ಚಿಮ ಮಂಗಾದ್​ ಪೂವತ್ತೂರ್​ ಹೌಸ್​ನ ನಿವಾಸಿ ಬಾಲಕೃಷ್ಣ ಅವರ ಪುತ್ರ. ಭಾನುವಾರ ತಡರಾತ್ರಿ 1.30ರಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಆಗಿದ್ದೇನು?

ಭಾನುವಾರ ಮಧ್ಯರಾತ್ರಿ ಸ್ನೇಹಿತನೊಬ್ಬ ಕರೆ ಮಾಡಿ ತನ್ನ ಬೈಕ್​ನಲ್ಲಿ ಪೆಟ್ರೋಲ್​ ಖಾಲಿಯಾಗಿ ರಸ್ತೆಯಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಶರತ್​ಗೆ ಹೇಳುತ್ತಾನೆ. ಅಲ್ಲದೆ, ನೆರವು ಬೇಕಿದೆ ಎಂದು ಕೇಳುತ್ತಾನೆ. ಬಳಿಕ ಶರತ್​, ತನ್ನ ಇನ್ನೊರ್ವ ಸ್ನೇಹಿತನ ಜೊತೆ ತಕ್ಷಣ ಮನೆಯಿಂದ ಹೊರಡುತ್ತಾನೆ. ಬೈಕ್​ನಲ್ಲಿ ಹೋಗುವಾಗ ಕುನ್ನಮ್ಕುಲಂ ಬಳಿ ಬೈಕ್​ ನಿಯಂತ್ರಣ ಕಳೆದುಕೊಂಡು ಎದುರುಗಡೆ ಇದ್ದ ಲೈಟ್​ ಕಂಬಕ್ಕೆ ಡಿಕ್ಕಿ ಹೊಡೆಯುತ್ತಾರೆ. ಗಂಭೀರ ಗಾಯಗೊಂಡಿದ್ದ ಶರತ್​ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದಾದರೂ ಆತನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಆತನ ಸ್ನೇಹಿತನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಶರತ್​ ಮದುವೆಯಾಗಿ ಐದು ವರ್ಷಗಳ ಬಳಿಕ ಅಪ್ಪನಾಗುವ ನಿರೀಕ್ಷೆಯಲ್ಲಿದ್ದ. ಆತನ ಗರ್ಭಿಣಿ ಪತ್ನಿ ನಮಿತಾರನ್ನು ಡೆಲಿವರಿಗಾಗಿ ಭಾನುವಾರ ಸಂಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಪಘಾತದ ಬಗ್ಗೆ ಆಕೆಗೆ ಮಾಹಿತಿ ನೀಡಿರಲಿಲ್ಲ. ಆಕೆ ಗಂಡನ ಬರುವಿಕೆಯನ್ನು ಎದುರು ನೋಡಿತ್ತಿದ್ದಳು. ಆದರೆ, ಗಂಡ ಮೃತಪಟ್ಟಿದ್ದ. ಸೋಮವಾರ ಮಧ್ಯಾಹ್ನ ಗಂಡು ಮಗುವಿಗೆ ಸಮಿತಾ ಜನ್ಮ ನೀಡಿದ್ದಾಳೆ.

ಮಗು ಹುಟ್ಟಿತು ಎಂದು ಖುಷಿ ಪಡಲಾ? ಅಥವಾ ಗಂಡ ಮೃತಪಟ್ಟನೆಂದು ದುಃಖಿಸಲಾ? ಎಂಬ ಸಂಕಟದ ಸ್ಥಿತಿಯಲ್ಲಿ ನಮಿತಾ ಸಿಲುಕಿಕೊಂಡಿದ್ದಾರೆ. ಈ ಘಟನೆಯನ್ನು ನೋಡಿದಾಗ ವಿಧಿ ಎಷ್ಟು ಕ್ರೂರಿ ಎಂದೆನಿಸದೇ ಇರದು. (ಏಜೆನ್ಸೀಸ್​)