ಕುಶಿನಗರ: ಉತ್ತರ ಪ್ರದೇಶದ ಕುಶಿನಗರದಲ್ಲಿ ಮದುವೆ ಸಂಭ್ರಮದ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟವರ ಸಂಖ್ಯೆ 13ಕ್ಕೇರಿದೆ. ಈ ಘನಘೋರ ಘಟನೆ ಬುಧವಾರ (ಫೆ.16) ತಡರಾತ್ರಿ ನಡೆದಿದ್ದು, ಆರಂಭದಲ್ಲಿ 11 ಮಂದಿ ಮೃತಪಟ್ಟಿದ್ದರು. ಇದೀಗ ಇನ್ನಿಬ್ಬರು ಮೃತಪಟ್ಟಿರುವುದು ತಿಳಿದುಬಂದಿದೆ.
ಸ್ಥಳೀಯ ಅಧಿಕಾರಿಗಳ ಪ್ರಕಾರ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಮತ್ತು ಮಕ್ಕಳು ಹಳೆಯ ಬಾವಿಯನ್ನು ಮುಚ್ಚಿದ್ದ ಚಪ್ಪಡಿಯ ಮೇಲೆ ಕುಳಿತಿದ್ದರು. ಈ ವೇಳೆ ಹೆಚ್ಚು ಭಾರದಿಂದಾಗಿ ಚಪ್ಪಡಿ ಕುಸಿದಿದ್ದು, ಅದರ ಮೇಲಿದ್ದವರೆಲ್ಲ ಬಾವಿ ಒಳಗೆ ಬಿದ್ದಿದ್ದಾರೆ. ತಕ್ಷಣ ಎಲ್ಲರನ್ನು ಬಾವಿಯಿಂದ ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟರಲ್ಲಾಗಲೇ 11 ಮಂದಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಇದೀಗ ಮತ್ತಿಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 13ಕ್ಕೇರಿದೆ.
ಈ ಬಗ್ಗೆ ಮಾತನಾಡಿರುವ ಗೋರಖ್ಪುರ ವಲಯದ ಎಡಿಜಿ ಅಖಿಲ್ ಕುಮಾರ್, ಸಾವಿನ ಸಂಖ್ಯೆ 13ಕ್ಕೇರಿದೆ. ನಿನ್ನೆ ರಾತ್ರಿ 8.30ರ ಸುಮಾರಿಗೆ ಈ ಘಟನೆ ಕುಶಿನಗರದ ನೆಬು ನೌರಂಗಿಯಾ ಪ್ರದೇಶದಲ್ಲಿ ನಡೆದಿದೆ. ಬಾವಿಯನ್ನು ಮುಚ್ಚಲಾಗಿದ್ದ ಚಪ್ಪಡಿಯ ಮೇಲೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಾಕಷ್ಟು ಮಂದಿ ಕುಳಿತಿದ್ದಾಗ ಭಾರ ತಡೆಯದೇ ಚಪ್ಪಡಿ ಕುಸಿದಿದೆ. ಅದರ ಮೇಲಿದ್ದವರು ತಕ್ಷಣ ಬಾವಿಗೆ ಕುಸಿದು ದುರಂತ ಘಟನೆ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ಬಂಧು-ಬಳಗದವರು ಆಸ್ಪತ್ರೆಗೆ ದೌಡಾಯಿಸಿದ್ದು, ತಮ್ಮ ಸಂಬಂಧಿಕರು ಹಾಗೂ ಕುಟುಂಬದ ಸದಸ್ಯರ ಮೃತದೇಹವನ್ನು ನೋಡಿ ಗೋಳಿಡುತ್ತಿದ್ದು, ಇಡೀ ಆಸ್ಪತ್ರೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮನಕಲಕುವಂತಿದೆ.
ಈ ಬಗ್ಗೆ ಮೊದಲೇ ಮಾಹಿತಿ ನೀಡಿದ್ದ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಸ್. ರಾಜಲಿಂಗಂ, ಆಕಸ್ಮಿಕವಾಗಿ ಬಾವಿಗೆ ಬಿದ್ದು 11 ಮಂದಿ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಬಗ್ಗೆ ನಾವು ಮಾಹಿತಿ ಪಡೆದೆವು. ಈ ಘಟನೆ ಮದುವೆ ಸಂಭ್ರಮದ ವೇಳೆ ನಡೆದಿದೆ. ಬಾವಿಗೆ ಮುಚ್ಚಲಾಗಿದ್ದ ಚಪ್ಪಡಿ ಮೇಲೆ ಕುಳಿತಿದ್ದಾಗ ಭಾರದಿಂದ ಚಪ್ಪಡಿ ಕುಸಿದು ಈ ದುರಂತ ಸಂಭವಿಸಿದೆ. ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ. ಕೂಡಲೇ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಸಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಎಂ ಯೋಗಿ ಅವರು ಸೂಚನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಕಾರ್ಯಾಲಯ ಟ್ವೀಟ್ ಮಾಡಿದೆ.
ಇದೀಗ ಪ್ರಧಾನಿ ಮೋದಿ ಅವರು ಕೂಡ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿ ಗಾಯಗೊಂಡವರ ಶೀಘ್ರ ಚೇತರಿಕೆಗೆ ಪಾರ್ಥನೆ ಸಲ್ಲಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ನೀಡುವ ಭರವಸೆಯನ್ನು ಪ್ರಧಾನಿ ಮೋದಿ ನೀಡಿದ್ದಾರೆ.
ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. (ಏಜೆನ್ಸೀಸ್)