ನ್ಯೂಸ್

ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ನದಿಯನ್ನು ದಾಟಿ ಪರೀಕ್ಷೆ ಬರೆದ ಯುವತಿ: ವಿಡಿಯೋ ವೈರಲ್​

ವಿಶಾಖಪಟ್ಟಣಂ: ಭಾರೀ ಮಳೆಯಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಯಲ್ಲಿ ಒಂದು ದಡದಿಂದ ಮತ್ತೊಂದು ದಡಕ್ಕೆ ಸಹೋದರ ನೆರವಿನಿಂದ ಈಜಿ ಬಂದು ಯುವತಿಯೊಬ್ಬಳು ಪರೀಕ್ಷೆ ಬರೆದಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ವಿಜಯನಗರ ಜಿಲ್ಲೆಯ ಮರಿವಲಾಸಾ ಗ್ರಾಮದ ವಿದ್ಯಾರ್ಥಿನಿ ಚಂಪಾವತಿ ನದಿಯನ್ನು ಸಹೋದರರ ನೆರವಿನಿಂದ ದಾಟುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಕಳೆದ ಕೆಲವು ದಿನಗಳಿಂದ ಗಜಪತಿನಗರಂ ಮಂಡಲದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಚಂಪಾವತಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಮರಿವಲಸಾ ಮತ್ತು ಇತರೆ ಗ್ರಾಮದ ಜನರು ನದಿಯನ್ನು ದಾಟಿ, ತಮ್ಮ ಗುರಿಯನ್ನು ತಲುಪಲು ಸಾಕಷ್ಟು ಹೋರಾಟ ನಡೆಸುತ್ತಿದ್ದಾರೆ.

ಮರಿವಲಸಾ ಗ್ರಾಮದ 21 ವರ್ಷದ ತಡ್ಡಿ ಕಲಾವತಿ ಪರೀಕ್ಷೆ ಬರೆಯಬೇಕಾಗಿತ್ತು. ಆದರೆ, ನದಿ ತುಂಬಿ ಹರಿಯುತ್ತಿರುವುದರಿಂದ ನದಿ ದಾಟುವುದು ಸವಾಲಿನ ಕೆಲಸವಾಗಿತ್ತು. ಈ ವೇಳೆ ಎದೆಗುಂದದ ಕಲಾವತಿ ತನ್ನಿಬ್ಬರು ಸಹೋದರರ ನೆರವು ಪಡೆದು ನದಿಯಲ್ಲಿ ಈಜಿ ದಡ ಸೇರಿ, ಪರೀಕ್ಷಾ ಕೇಂದ್ರಕ್ಕೆ ತೆರಳಿ, ಪರೀಕ್ಷೆ ಬರೆದು ಬಂದಿದ್ದಾರೆ. ಕಲಾವತಿ ನದಿ ದಾಟುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. (ಏಜೆನ್ಸೀಸ್​)