ನ್ಯೂಸ್

ಒದ್ದಾಡುತ್ತಿರೋ ತಂದೆಗೆ ನೀರು ಕುಡಿಸಲು ಬಿಡದ ತಾಯಿ: ಕರೊನಾ 2ನೇ ಅಲೆ ಭೀಕರತೆಗೆ ಈ ಘಟನೆಯೇ ಸಾಕ್ಷಿ!

ಹೈದರಾಬಾದ್​: ಕರೊನಾ ಸೋಂಕಿತ ತಂದೆಗೆ ನೀರು ಕುಡಿಸಲು ತನ್ನ ತಾಯಿಯ ಜತೆಯೇ ಮಗಳು ಹೋರಾಟ ನಡೆಸಿದ ಮನಕಲಕುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮಹಾಮಾರಿ ಕರೊನಾ ವೈರಸ್​ ಎರಡನೇ ಅಲೆಯು ದೇಶದಲ್ಲಿ ಸೃಷ್ಟಿಸಿರುವ ಭೀಕರತೆಗೆ ಈ ಘಟನೆ ಸಾಕ್ಷಿಯಾಗಿದೆ. ಪ್ರತಿನಿತ್ಯ ಇಂತಹ ಅಮಾನವೀಯ ಘಟನೆ ಸಾಮಾನ್ಯವಾಗಿದ್ದು, ರಕ್ತ ಸಂಬಂಧಗಳನ್ನೇ ಕಷ್ಟಕಾಲದಲ್ಲಿ ಹೊರಗಿಡುವಂತಹ ವಾತಾವರಣ ನಿರ್ಮಾಣವಾಗಿರುವುದು, ಓ ವಿಧಿಯೇ ನೀನೆಷ್ಟು ಕ್ರೂರಿ ಎಂದು ಶಪಿಸುವಂತಿದೆ.

ಘಟನೆಯ ವಿವರಣೆಗೆ ಬರುವುದಾದರೆ, ವಿಜಯವಾಡದಲ್ಲಿ ಕೆಲಸ ಮಾಡುತ್ತಿದ್ದ 50 ವರ್ಷದ ವ್ಯಕ್ತಿ ಕರೊನಾ ಪಾಸಿಟಿವ್​ ಆದ ಬಳಿಕ ಶ್ರೀಕಾಕುಳಂನಲ್ಲಿರುವ ತನ್ನ ಮನೆಗೆ ಮರಳುತ್ತಾನೆ. ಆದರೆ, ತಮ್ಮದೇ ಗ್ರಾಮದ ಜನರು ಆತನನ್ನು ಸೇರಿಸಿಕೊಳ್ಳುವುದಿಲ್ಲ. ಹೀಗಾಗಿ ಗ್ರಾಮದ ಹೊರಭಾಗದ ಮೈದಾನದಲ್ಲಿ ಗುಡಿಸಲು ಕಟ್ಟಿಕೊಂಡು ಉಳಿಯುವಂತೆ ಒತ್ತಾಯ ಮಾಡುತ್ತಾರೆ.

ಇತ್ತ ತುಂಬಾ ದಣಿದಿದ್ದ ಸೋಂಕಿತ ತಂದೆಯ ನರಳಾಟ ನೋಡದೇ 17 ವರ್ಷದ ಮಗಳು ನೀರಿನ ಬಾಟಲ್​ ತೆಗೆದುಕೊಂಡು ಹೋಗಿ ತಂದೆಗೆ ನೀರು ಕುಡಿಸಲು ಮುಂದಾದಾಗ ಆಕೆಗೂ ಸೋಂಕು ತಗಲಬಹುದು ಎಂದು ತಾಯಿ ಆಕೆಯನ್ನು ಹಿಂಬದಿಯಿಂದ ಹಿಡಿದುಕೊಳ್ಳುತ್ತಾಳೆ.

ಅಷ್ಟರಲ್ಲಿ ತಂದೆ ನೆಲದ ಮೇಲೆ ಬಿದ್ದು ಒದ್ದಾಡುವಾಗ ಹೇಗೋ ತಾಯಿಯಿಂದ ಬಿಡಿಸಿಕೊಂಡು ಹೋಗಿ ಮಗಳು ಆತನಿಗೆ ನೀರು ಕುಡಿಸುತ್ತಾಳೆ.

ವಿಡಿಯೋ ಚಿತ್ರೀಕರಿಸಿದ ವ್ಯಕ್ತಿ ಹೇಳುವಂತೆ ಸೋಂಕಿತನಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಯಾವುದೇ ಆಸ್ಪತ್ರೆಗಳಲ್ಲಿ ಬೆಡ್​ಗಳು ಇರಲಿಲ್ಲ. ಇದರಿಂದಾಗಿ ಕೆಲವೇ ಹೊತ್ತಲ್ಲಿ ಮೃತಪಟ್ಟ. ಅವನ ಕುಟುಂಬಕ್ಕೂ ಸಹ ಕರೊನಾ ಪಾಸಿಟಿವ್​ ದೃಢಪಟ್ಟಿದೆ ಎಂದು ಹೇಳಿದ್ದಾನೆ.

ಇನ್ನು ಈ ಘಟನೆಯು ಕೋವಿಡ್ ಸೋಂಕಿಗೆ ಅಂಟಿಕೊಂಡಿರುವ ಕಳಂಕವನ್ನು ಬಹಿರಂಗಪಡಿಸುತ್ತದೆ. ಎರಡನೇ ಅಲೆಯು ದೇಶದ ಹಳ್ಳಿಗಳಲ್ಲಿ, ಕುಟುಂಬಗಳಿಗೂ ಹರಡಿದೆ ಎಂಬುದನ್ನು ಸಾಬೀತು ಮಾಡಿದೆ.

ಆಂಧ್ರಪ್ರದೇಶದಲ್ಲಿ ಒಂದು ದಿನದಲ್ಲಿ ಸುಮಾರು 20,000 ಪ್ರಕರಣಗಳು ಮತ್ತು 71 ಸಾವುಗಳು ವರದಿಯಾಗಿವೆ. ಈವರೆಗೆ ರಾಜ್ಯವು ಸುಮಾರು 11 ಲಕ್ಷ ಪ್ರಕರಣಗಳನ್ನು ದಾಖಲಿಸಿದೆ. (ಏಜೆನ್ಸೀಸ್​)