ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾಕಷ್ಟು ವಿಡಿಯೋಗಳು ಪೋಸ್ಟ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿಬಿಡುತ್ತವೆ. ಆ ಸಾಲಿಗೆ ಇದೀಗ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ.
ಕ್ಯಾಮೆರಾ ಮುಂದೆ ನಿಂತು ವರದಿ ಮಾಡುವಾಗ ತೊಂದರೆ ಕೊಟ್ಟ ಯುವಕನಿಗೆ ಪಾಕಿಸ್ತಾನದ ವರದಿಗಾರ್ತಿ ಕಪಾಳಕ್ಕೆ ಬಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜುಲೈ 9ರಂದು ಇಡೀ ವಿಶ್ವದಾದ್ಯಂತ ಆಚರಿಸಲಾದ ಬಕ್ರೀದ್ ಹಬ್ಬದ ಕುರಿತಾಗಿ ವರದಿ ಮಾಡುವಾಗ ಈ ಪ್ರಸಂಗ ಜರುಗಿದೆ.
ವಿಡಿಯೋದಲ್ಲಿ ಏನಿದೆ?
ವರದಿಗಾರ್ತಿಯೊಬ್ಬಳು ಜನರ ಮಧ್ಯೆ ಕ್ಯಾಮೆರಾ ಮುಂದೆ ನಿಂತು ವರದಿ ಮಾಡುತ್ತಿರುತ್ತಾರೆ. ಈ ವೇಳೆ ತಾಳ್ಮೆ ಕಳೆದುಕೊಳ್ಳುವ ವರದಿಗಾರ್ತಿ ಪಕ್ಕದಲ್ಲೇ ನಿಂತಿದ್ದ ಹುಡುಗನ ಕಪಾಳಕ್ಕೆ ಬಾರಿಸುತ್ತಾರೆ.
ಪತ್ರಕರ್ತೆ ಕೋಪವನ್ನು ಕಳೆದುಕೊಂಡಿದ್ದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಹುಡುಗ ಕೆಲವು ಅನಗತ್ಯ ಕಾಮೆಂಟ್ ಮಾಡಿರಬಹುದು ಎಂದು ತೋರುತ್ತಿದೆ. ಸದ್ಯ ವಿಡಿಯೋ ವೈರಲ್ ಆಗಿದ್ದು, 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್)