ಲಖನೌ: ದೇವರ ದರ್ಶನ ಮುಗಿಸಿ ಹರಿದ್ವಾರದಿಂದ ಹಿಂದಿರುಗುವಾಗ ಟ್ರಕ್ ಒಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 10 ಮಂದಿ ಭಕ್ತರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಪಿಲಿಭಿತ್ನಲ್ಲಿ ಗುರುವಾರ (ಜೂನ್ 23) ಮುಂಜಾನೆ ಸಂಭವಿಸಿದೆ.
ಅಪಘಾತದಲ್ಲಿ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಂದು ನಸುಕಿನ ಜಾವ 4.30ರ ಸುಮಾರಿಗೆ ಅಪಘಾತದ ಸಂಭವಿಸಿದೆ.
ಭಕ್ತರು ಹರಿದ್ವಾರದಲ್ಲಿ ದೇವರ ದರ್ಶನ ಮುಗಿಸಿ ಉತ್ತರ ಪ್ರದೇಶದ ಲಖೀಂಪುರ್ಗೆ ಹಿಂತಿರುಗಿದ್ದರು. ಟ್ರಕ್ನಲ್ಲಿ 17 ಮಂದಿ ಇದ್ದರು. ಇದರಲ್ಲಿ 10 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮುಂಜಾನೆಯ ಮಂಜಿನಿಂದಾಗಿ ಸ್ಪಷ್ಟವಾಗಿ ಗೋಚರಿಸದೆ ಅಪಘಾತ ಸಂಭವಿಸಿದೆ ಎಂದು ಆರಂಭದಲ್ಲಿ ಊಹಿಸಲಾಗಿತ್ತು. ಇದೀಗ ಕಾರು ಅತಿವೇಗವಾಗಿ ಚಲಿಸುತ್ತಿತ್ತು ಎಂದೂ ಶಂಕಿಸಲಾಗಿದೆ. ಬ್ರೇಕ್ ವೈಫಲ್ಯದಿಂದ ರಾಷ್ಟ್ರೀಯ ಹೆದ್ದಾರಿ ಬದಿಯ ಮರಕ್ಕೆ ಲಾರಿ ಡಿಕ್ಕಿ ಹೊಡೆದಿದೆ. ಅದಕ್ಕಾಗಿಯೇ ಭಯಾನಕ ಘಟನೆ ಸಂಭವಿಸಿದೆ ಎನ್ನಲಾಗಿದೆ. (ಏಜೆನ್ಸೀಸ್)