ನ್ಯೂಸ್

ಇದೆಂಥಾ ದುರ್ವಿಧಿ: ದೇವರಿಗೆ ಪೂಜೆ ಮಾಡಿ ನಿಟ್ಟುಸಿರು ಬಿಡುವಷ್ಟರಲ್ಲೇ ರೈತನಿಗೆ ಶಾಕ್​!

ಗಾಡ್ವಾಲ: ಬೆಳೆದ ಬೆಳೆಯಿಂದ ಬಂದಿದ್ದ ರೈತನ ಲಕ್ಷಾಂತರ ರೂಪಾಯಿ ಹಣವು ಬೆಕ್ಕಿನಿಂದಾಗಿ ಸುಟ್ಟು ಕರಲಾಗಿರುವ ಘಟನೆ ತೆಲಂಗಾಣದ ಜೊಗುಲಾಂಬ ಗಾಡ್ವಾಲ ಜಿಲ್ಲೆಯ ಕಾಟಿನ್​ದೊಡ್ಡಿ ಮಂಡಲದಲ್ಲಿ ನಡೆದಿದೆ.

ತೆಲುಗು ವೀರೇಶ್​ ಹಣ ಕಳೆದುಕೊಂಡ ರೈತ. ಭತ್ತ ಬೆಳೆದಿದ್ದ ವೀರೇಶ್​ ಅದನ್ನು ಸರ್ಕಾರಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ್ದ. ಇದೇ ತಿಂಗಳ 1ನೇ ತಾರೀಖಿನಂದು ಭತ್ತ ಮಾರಿದ 1 ಲಕ್ಷ ರೂ. ಹಣ ಆತನ ಬ್ಯಾಂಕ್​ ಖಾತೆಗೆ ಜಮೆಯಾಗಿತ್ತು.

ಶನಿವಾರ ಒಂದು ಲಕ್ಷ ರೂ. ಹಣವನ್ನು ಡ್ರಾ ಮಾಡಿಕೊಂಡು ಮನೆಗೆ ಬಂದಿದ್ದ. ಹಣವನ್ನು ಬಟ್ಟೆಯಿಂದ ಸುತ್ತಿ ಬ್ಯಾಗ್​ನಲ್ಲಿ ಇಟ್ಟಿದ್ದ.

ವೀರೇಶ್​ ಎಂದಿನಂತೆ ಸೋಮವಾರ ದೀಪ ಹಚ್ಚಿ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಆದರೆ, ಅವರ ಅದೃಷ್ಟ ಚೆನ್ನಾಗಿಲಿಲ್ಲ ಅನಿಸುತ್ತದೆ. ಏಕೆಂದರೆ, ಮನೆಯಲ್ಲಿದ್ದ ಬೆಕ್ಕು ಉರಿಯುತ್ತಿದ್ದ ದೀಪವನ್ನು ಬೀಳಿಸಿದೆ. ಮೊದಲೇ ಗುಡಿಸಲು ಮನೆಯಾದ್ದರಿಂದ ಬೆಂಕಿ ಹೊತ್ತಿಕೊಂಡು ಇಡೀ ಮನೆಯನ್ನು ಆವರಿಸಿದೆ.

ಬೆಂಕಿಯ ಜ್ವಾಲೆಗೆ ಮನೆಯಲ್ಲಿ ಬಟ್ಟೆಯಲ್ಲಿ ಸುತ್ತಿಟ್ಟಿದ್ದ 1 ಲಕ್ಷ ರೂ. ಹಣವು ಸುಟ್ಟುಕರಕಲಾಗಿದೆ. ಬೆಳೆ ಬೆಳೆಯಲು ಮಾಡಿದ್ದ 50 ಸಾವಿರ ರೂ. ಸಾಲವನ್ನು ತೀರಿಸುವುದಕ್ಕಾಗಿ ವೀರೇಶ್​ ಬ್ಯಾಂಕ್​ನಿಂದ ಹಣ ಡ್ರಾ ಮಾಡಿಕೊಂಡು ಬಂದಿದ್ದರು. ಆದರೆ, ವಿಧಿಯ ಆಟವೇ ಬೇರೆ ಇತ್ತು. ಹಣ ಮತ್ತು ಮನೆ ಕಳೆದುಕೊಂಡು ವೀರೇಶ್​ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. (ಏಜೆನ್ಸೀಸ್​)