ನ್ಯೂಸ್

ದುರಂತ ಅಂತ್ಯ ಕಂಡ ಟೆಕ್ಕಿ: ಸುಂದರಿಯ ಡೈರಿ-ಮೊಬೈಲ್​ನಲ್ಲಿರೋ ಬಾಯ್​ಫ್ರೆಂಡ್​ ರಹಸ್ಯದ ಹಿಂದೆ ಬಿದ್ದ ಪೊಲೀಸರು!

ಭುವನೇಶ್ವರ: ಸಾಫ್ಟ್​ವೇರ್​ ಇಂಜಿನಿಯರ್​ ಒಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಒಡಿಶಾದಲ್ಲಿ ನಡೆದಿದ್ದು, ಮೃತಳ ಕುಟುಂಬ ಆಕೆಯ ಬಾಯ್​ಫ್ರಂಡ್​ ವಿರುದ್ಧ ಗಂಭೀರ ಆರೋಪ ಮಾಡಿದೆ.

ಮೃತ ಟೆಕ್ಕಿಯನ್ನು ಶ್ವೇತಾ ಉತ್ಕಲ್​ ಕುಮಾರಿ ಎಂದು ಗುರುತಿಸಲಾಗಿದೆ. ಈಕೆ ಒಡಿಶಾದ ಭದ್ರಕ್​ ನಿವಾಸಿ. ಈಕೆಯ ಬಾಯ್​ಫ್ರೆಂಡ್​ ಸೌಮ್ಯಜಿತ್​ ಮೊಹಪಾತ್ರ ವಿರುದ್ಧ ಶ್ವೇತಾ ಕುಟುಂಬ ದೂರು ದಾಖಲಿಸಿದೆ. ಶ್ವೇತಾ ಜೊತೆಗಿನ ತನ್ನ ಸಂಬಂಧವನ್ನು ಕಡಿದುಕೊಂಡ ಬಳಿಕ ಆಕೆಯ ಖಾಸಗಿ ಫೋಟೋಗಳನ್ನು ಬಿಡುಗಡೆ ಮಾಡುತ್ತೇನೆಂದು ಬೆದರಿಕೆ ಹಾಕಿದ್ದಕ್ಕೆ ಹೆದರಿ ಶ್ವೇತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಕುಟುಂಬ ದೂರಿನಲ್ಲಿ ಉಲ್ಲೇಖಿಸಿದೆ.

ಶ್ವೇತಾಳ ಶವ ಶನಿವಾರ ರಾತ್ರಿ ತನ್ನ ಫ್ಲ್ಯಾಟ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆ ಸ್ನೇಹಿತೆ ಫ್ಲ್ಯಾಟ್​ನಲ್ಲಿ ಇಲ್ಲದಿರುವ ಸಮಯ ನೋಡಿ ಶ್ವೇತಾ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಆಕೆಯ ಕುಟುಂಬದವರು ದೂರು ದಾಖಲಿಸಿದ ಬೆನ್ನಲ್ಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಫ್ಲ್ಯಾಟ್​ನಲ್ಲಿ ದೊರೆತ ಶ್ವೇತಾಳ ಮೊಬೈಲ್​ ಮತ್ತು ಡೈರಿಯಿಂದ ಸೌಮ್ಯಜಿತ್​ ಜೊತೆಗಿನ ಆಕೆಯ ಸಂಬಂಧದ ಬಗ್ಗೆ ತಿಳಿದುಕೊಂಡಿದ್ದಾರೆ.

ಸಾವಿಗೂ ಮುನ್ನ ಶ್ವೇತಾ 15 ಬಾರಿ ಸೌಮ್ಯಜಿತ್​ಗೆ ಕರೆ ಮಾಡಿದ್ದಾಳೆ. ಆದರೆ, ಆತ ಕರೆ ಸ್ವೀಕರಿಸಿಲ್ಲ. ಇಬ್ಬರ ನಡುವೆ ನಡೆದಿರುವ ಸಂಭಾಷಣೆಯ ಆಡಿಯೋ ತುಣುಕು ಸಹ ತದನಂತರದಲ್ಲಿ ಬೆಳಕಿಗೆ ಬಂದಿದೆ. ನನ್ನ ಜೀವನದಿಂದ ಆಚೆ ಹೋಗುವಂತೆ ಸೌಮ್ಯಜಿತ್​ ಕೇಳಿರುವುದು ಆಡಿಯೋದಲ್ಲಿದೆ. ಇನ್ನು ಇಬ್ಬರ ಮದುವೆಗೆ ಮಾತುಕತೆಯು ನಡೆದಿತ್ತಂತೆ. ಸೌಮ್ಯಜಿತ್​ ಕುಟುಂಬದ ಜೊತೆ ಮದುವೆ ಬಗ್ಗೆ ಮಾತನಾಡಿದಾಗ ಸೌಮ್ಯಜಿತ್​ ತಾಯಿ 30 ಲಕ್ಷ ರೂಪಾಯಿ ವರದಕ್ಷಿಣೆ ಕೇಳಿದರು ಎಂದು ಆರೋಪ ಮಾಡಿದ್ದಾರೆ.

ಪ್ರಕರಣವು ನಾನಾ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಶ್ವೇತಾ ಆತ್ಮಹತ್ಯೆ ಮಾಡಿಕೊಂಡ ಒಂದು ದಿನದ ಬೆನ್ನಲ್ಲೇ ಸೌಮ್ಯಜಿತ್​​ನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದು, ಹೆಚ್ಚಿ ವಿಚಾರಣೆಯನ್ನು ನಡೆಸುತ್ತಿದ್ದಾರೆ. (ಏಜೆನ್ಸೀಸ್​)