ನ್ಯೂಸ್

ರೂಪದರ್ಶಿ ಖಂಡಿಲ್​ ಬಲೂಚ್​ ಹತ್ಯೆಗೈದ ಸಹೋದರನನ್ನು ಬಿಡುಗಡೆ ಮಾಡಿದ ಪಾಕ್ ನ್ಯಾಯಾಲಯ..!​

ಇಸ್ಲಮಾಬಾದ್​: ಲಾಹೋರ್​ ಹೈಕೋರ್ಟ್​ (ಎಲ್​​ಎಚ್​ಸಿ)ನ ಮುಲ್ತಾನ್​ ಪೀಠವು ಮಾಡೆಲ್ ಹಾಗೂ ಸೋಶಿಯಲ್​ ಮೀಡಿಯಾ ಸ್ಟಾರ್​ ಖಂಡಿಲ್​ ಬಲೂಚ್​ (25) ಕೊಲೆ ಪ್ರಕರಣದಿಂದ ಆಕೆಯ ಸಹೋದರ ವಾಸಿಂ ಬಲೂಚ್​ನನ್ನು ಖುಲಾಸೆಗೊಳಿಸಿದ್ದು, ಮೂರು ವರ್ಷಗಳ ಬಳಿಕ ವಾಸಿಂ ಜೈಲಿನಿಂದ ಬಿಡುಗಡೆಯಾಗಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಫೋಟೋಗಳನ್ನು ಪೋಸ್ಟ್​ ಮಾಡಿದ್ದಕ್ಕೆ ಕಿರಿಯ ಸಹೋದರಿ ಖಂಡಿಲ್​ ಬಲೂಚ್​ಳನ್ನು ಕೊಲೆ ಮಾಡಿದ್ದಾಗಿ 2016ರಲ್ಲಿ ವಾಸಿಂ ವಿಡಿಯೋ ರೆಕಾರ್ಡ್​ ಮೂಲಕ ತಪ್ಪೊಪ್ಪಿಕೊಂಡಿದ್ದ. ತಂಗಿಯ ವರ್ತನೆಯಿಂದ ಕುಟುಂಬದ ಗೌರವ ಮಣ್ಣು ಪಾಲಾಗಿದ್ದರಿಂದ ಕೃತ್ಯ ಎಸಗಿದ್ದಾಗಿ ಹೇಳಿಕೊಂಡಿದ್ದ.

ಆರಂಭದಲ್ಲಿ ಪೊಲೀಸರು ಇದೊಂದು ಮರ್ಯಾದೆ ಹತ್ಯೆ ಎಂದು ನಂಬಿದ್ದರು. ನಂತರ ವಾಸಿಂ ನೀಡಿದ ಹೇಳಿಕೆಯಿಂದ ಮರ್ಯಾದೆ ಹತ್ಯೆ ಎಂಬುದು ನಿಜವವಾಯಿತು. ಖಂಡಿಲ್​ ಬಲೂಚ್​ಳ ನಿಜವಾದ ಹೆಸರು ಫೌಜಿಯಾ ಅಜೀಮ್​. ಆದರೆ, ಮಾಡೆಲಿಂಗ್​ಗೆ ಬಂದ ಮೇಲೆ ಆಕೆ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದಳು. ತನ್ನ ಫೋಟೋ ಮತ್ತು ವಿಡಿಯೋಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ವಿವಾದದ ಕೇಂದ್ರ ಬಿಂದುವಾಗಿದ್ದಳು.

ಖಂಡಿಲ್ ಬಲೂಚ್​ಳನ್ನು ಕೊಂದ ಆರೋಪದ ಮೇಲೆ ತಪ್ಪೊಪ್ಪಿಕೊಂಡ ನಂತರವೂ ತಾನು ಎಸಗಿದ ಅಪರಾಧಕ್ಕೆ ಶಿಕ್ಷೆ ನೀಡಬಾರದೆಂದು ವಾಸಿಂ, ನ್ಯಾಯಾಲಯವನ್ನು ವಿನಂತಿಸಿದ್ದರು. ಆದರೂ 2019ರಲ್ಲಿ ಆತನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು. 2016ರಲ್ಲಿ ಖಂಡಿಲ್​ಳನ್ನು ಉಸಿರುಗಟ್ಟಿಸಿ ವಾಸಿಂ ಕೊಲೆ ಮಾಡಿದ್ದ. ಅಲ್ಲದೆ, ತಂಗಿಯನ್ನು ಕೊಲೆ ಮಾಡಿದ್ದಕ್ಕೆ ಹೆಮ್ಮೆ ಪಡುತ್ತೇನೆಂದು ಹೇಳಿಕೊಂಡಿದ್ದ.

ಈ ಸಮಯದಲ್ಲಿ ಯಾರಾದರೂ ಕುಟುಂಬದ ಸದಸ್ಯರನ್ನು ಕೊಂದರೆ ಮತ್ತು ಇತರ ಕುಟುಂಬ ಸದಸ್ಯರು ಹತ್ಯೆಯನ್ನು ಬೆಂಬಲಿಸಿದರೆ ಆ ಪ್ರಕರಣದಲ್ಲಿ ಅವರಿಗೆ ಶಿಕ್ಷೆಯಾಗದಿರಲು ಕ್ಷಮೆಯಾಚಿಸಲು ಪಾಕಿಸ್ತಾನದ ಕಾನೂನು ಅನುವು ಮಾಡಿಕೊಟ್ಟಿತ್ತು.

ಇದೀಗ ಅಪರಾಧಿಯನ್ನು ಪಾಕ್​ ನ್ಯಾಯಾಲಯ ಬಿಡುಗಡೆ ಮಾಡಿದ್ದು, ಪಾಕ್​ನಲ್ಲಿ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವಲ್ಲಿ ಪಾಕ್​ ಕಾನೂನು ವಿಫಲವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. (ಏಜೆನ್ಸೀಸ್​)