ನ್ಯೂಸ್

ನಟ ಸಿಂಬು ಕಾರು ಚಾಲಕನ ಎಡವಟ್ಟಿಗೆ ವಿಕಲಚೇತನ ದುರಂತ ಸಾವು: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

ಚೆನ್ನೈ: ಕಾಲಿವುಡ್​ ಸೂಪರ್​ಸ್ಟಾರ್​ ಸಿಂಬುಗೆ ಸಂಬಂಧಿಸಿದ ಇನ್ನೋವಾ ಕಾರು ಅಪಘಾತದಲ್ಲಿ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ಸಿಂಬು ಅವರು ತಂದೆ ಟಿ. ರಾಜೇಂದ್ರನ್​ ತಮ್ಮ ಮೊಮ್ಮಗಳನ್ನು ಕರೆದುಕೊಂಡು ಚಿಕಿತ್ಸೆಗೆಂದು ಸೋಮವಾರ (ಮಾ.21) ರಾತ್ರಿ ಆಸ್ಪತ್ರೆಗೆ ತೆರಳುತ್ತಿದ್ದರು. ಈ ವೇಳೆ ಅವರ ಡ್ರೈವರ್​ ಸೆಲ್ವಂ ಕಾರು ಚಾಲನೆ ಮಾಡುತ್ತಿದ್ದ. ಚೆನ್ನೈನ ತೇನಾಂಪೇಟೆಯಲ್ಲಿ ಕಾರು 70 ವರ್ಷದ ದಾರಿಹೋಕನಿಗೆ ಗುದ್ದಿದೆ. ಇದರಿಂದ ಆತ ಗಂಭೀರವಾಗಿ ಗಾಯಗೊಂಡಿದ್ದ. ಇದರ ಬೆನ್ನಲ್ಲೇ ಸಿಂಬು ತಂದೆ ಆ್ಯಂಬುಲೆನ್ಸ್​ ಕರೆ ಮಾಡಿ ಆತನನ್ನು ಆಸ್ಪತ್ರೆಗೆ ಸ್ಥಳಾಂತರಿಸಿದರು.

ಘಟನೆಯ ನಂತರ ಸಿಂಬು ತಂದೆ ತಮ್ಮ ಮತ್ತೊಂದು ಕಾರಿಗೆ ಫೋನ್ ಮಾಡಿ ಮನೆಗೆ ವಾಪಸ್ ಆಗಿದ್ದಾರೆ. ಚಾಲಕ ಸೆಲ್ವಂ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ದುರಾದೃಷ್ಟವಶಾತ್​ ಗಾಯಗೊಂಡಿದ್ದ 70 ವರ್ಷದ ವ್ಯಕ್ತಿ ಚಿಕಿತ್ಸೆ ಫಲಿಸದೇ ನಿನ್ನೆ (ಮಾ.23) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತನನ್ನು ಮುನುಸ್ವಾಮಿ ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾನೂನು ಕ್ರಮದ ಪ್ರಕ್ರಿಯೆ ಕೈಗೊಂಡಿದ್ದಾರೆ.

ಅಂದಹಾಗೆ ಮೃತ ಮುನುಸ್ವಾಮಿ ವಿಕಲಚೇತನರಾಗಿದ್ದು, ಅಪಘಾತಕ್ಕೂ ಮುನ್ನ ನಡುರಸ್ತೆಯಲ್ಲಿ ತೆವಳುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಅದನ್ನು ನೋಡದೆ ಕಾರು ಚಾಲಕ ಸೆಲ್ವಂ ಡಿಕ್ಕಿ ಹೊಡೆದುಕೊಂಡು ಹೋಗಿದ್ದಾರೆ. ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಒಂದು ಜೀವ ಹೋಗಿದೆ. ಮೃತ ಕುಟುಂಬಕ್ಕೆ ಸಿಂಬು ಕುಟುಂಬ ಆರ್ಥಿಕ ನೆರವು ನೀಡುವ ಸಾಧ್ಯತೆ ಇದೆ. (ಏಜೆನ್ಸೀಸ್​)

(ವಿಡಿಯೋ ಕೃಪೆ: ತಂತಿ ಟಿವಿ)