ನ್ಯೂಸ್

ಜಾಲತಾಣದಲ್ಲಿ ಶಾಸಕಿಯ ಅಶ್ಲೀಲ ವಿಡಿಯೋ ವೈರಲ್​: ಬೆದರಿಕೆ ಕರೆಗಳು ಬರುತ್ತಿವೆ ಎಂದ ನಾಯಕಿ

ಇಸ್ಲಮಾಬಾದ್​: ಇತ್ತೀಚೆಗೆ ಪಾಕಿಸ್ತಾನದ ಶಾಸಕಿ ಒಬ್ಬರು ಸೈಬರ್​ ಕ್ರೈಂ ಬಲಿಪಶುವಾಗಿದ್ದು, ಅವರ ಅಶ್ಲೀಲ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವುದಾಗಿ ವರದಿಯಾಗಿದೆ.

ಶಾಸಕಿಯನ್ನು ಸಾನಿಯಾ ಆಶಿಕ್​ ಎಂದು ಗುರುತಿಸಲಾಗಿದೆ. ಇವರು ಪಾಕಿಸ್ತಾನದ ಮುಸ್ಲಿಂ ಲೀಗ್​ ನವಾಜ್​ (ಪಿಎಂಎಲ್​-ಎನ್​) ಪಕ್ಷದ ನಾಯಕಿ. ಪಂಜಾಬ್ ಪ್ರಾಂತ್ಯದ ಟಾಕ್ಸಿಲಾ ವಿಧಾನಸಭಾ ಕ್ಷೇತ್ರದದಿಂದ ಶಾಸಕಿ ಆಗಿ ಆಯ್ಕೆ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿರುವುದು ಬೆಳಕಿಗೆ ಬಂದ ಬಳಿಕ ಶಾಸಕಿ ಸೈಬರ್​ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಾದ ಬೆನ್ನಲ್ಲೇ ಪೊಲೀಸ್​ ಆರೋಪಿ ಒಬ್ಬನನ್ನು ಬಂಧಿಸಿದ್ದಾರೆ. ಆದರೆ, ಪ್ರಕರಣದ ಬಗ್ಗೆ ಹೆಚ್ಚು ಮಾಹಿತಿ ಇನ್ನು ಬಹಿರಂಗವಾಗಿಲ್ಲ. ಅಶ್ಲೀಲ ವಿಡಿಯೋ ಬಗ್ಗೆ ಕಳೆದ ಅಕ್ಟೋಬರ್​ನಲ್ಲಿ ಸಂತ್ರಸ್ತ ಶಾಸಕಿಗೆ ತಿಳಿದಿತ್ತು. ಬಳಿಕ ಅವರು ಸರ್ಕಾರ ಮತ್ತು ಕೇಂದ್ರ ತನಿಖಾ ಸಂಸ್ಥೆಗೆ ಈ ಬಗ್ಗೆ ಮಾಹಿತಿ ನೀಡಿದ್ದರು ಎಂದು ತಿಳಿದುಬಂದಿದೆ.

ಪಾಕಿಸ್ತಾನದ ಅರಿ ನ್ಯೂಸ್​ ಪ್ರಕಾರ ಅಕ್ಟೋಬರ್​ 26ರಂದು ಪಾಕ್​ನ ಫೆಡರಲ್​ ತನಿಖಾ ಸಂಸ್ಥೆ (ಎಫ್​ಐಎ)ಗೆ ದೂರು ನೀಡಿದ್ದಾರೆ. ತನ್ನ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ದೂರಿನಲ್ಲಿ ಶಾಸಕಿ ಉಲ್ಲೇಖಿಸಿದ್ದಾರೆ. ವಿಡಿಯೋದಲ್ಲಿ ಇರುವುದು ಸಾನಿಯಾ ಅವರೇ ಎಂದು ಅನೇಕ ಮಂದಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಪಾದಿಸಿದ್ದಾರೆ. ಆದರೆ, ಅದನೆಲ್ಲ ಸಾನಿಯಾ ಅವರು ನಿರಾಕರಿಸಿದ್ದಾರೆ.

ಸಾನಿಯಾ ದೂರಿನ ಬಳಿಕ ಪಂಜಾಬ್​ ಪ್ರಾಂತ್ಯದ ಎಫ್​ಐಎ ಮತ್ತು ಪೊಲೀಸ್​ ತನಿಖೆ ಆರಂಭಿಸಿದ ಮೂರು ವಾರಗಳ ನಂತರ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಪೊಲೀಸರು ತಾವು ಬಂಧಿಸಿದ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸಿಲ್ಲ ಅಥವಾ ವೀಡಿಯೊದಲ್ಲಿರುವ ಮಹಿಳೆ ಸಾನಿಯಾ ಅಥವಾ ಬೇರೆ ಯಾರಾದರೂ ಎಂದು ಅವರು ಖಚಿತಪಡಿಸಿಲ್ಲ. ಹೀಗಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ.

ಇನ್ನು ತನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಶಾಸಕಿ ಸಾನಿಯಾ ಹೇಳಿಕೊಂಡಿರುವುದಾಗಿ ಹಲವಾರು ಮಾಧ್ಯಮ ವರದಿ ಮಾಡಿದೆ. ಅಂದಹಾಗೆ ಸಾನಿಯಾ ಅವರು ಪಾಕ್​ನ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮರ್ಯಮ್ ನವಾಜ್‌ಗೆ ಆಪ್ತರಾಗಿದ್ದಾರೆ. (ಏಜೆನ್ಸೀಸ್​)