ಬೆಂಗಳೂರು: ಲೇಔಟ್ ನಿವೇಶನ ಹಂಚಿಕೆಯಲ್ಲಿ ಪಾಲುದಾರನಿಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ಎಂಎಲ್ಸಿ ಆರ್.ಶಂಕರ್ ಅವರ ಪುತ್ರ ಮತ್ತು ಪತ್ನಿಯ ಹೆಸರು ಕೇಳಿಬಂದಿದ್ದು, ಎಫ್ಐಆರ್ ಸಹ ದಾಖಲಾಗಿದೆ.
ಬಿಜೆಪಿ ಎಂಎಲ್ಸಿ ಆರ್. ಶಂಕರ್ ಅವರ ಪತ್ನಿ ಧನಲಕ್ಷ್ಮಿ ಆರ್ ಶಂಕರ್ ಹಾಗೂ ಪುತ್ರ ಜ್ಯೋತಿರ್ ತೇಜೋಮಯಿ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಆರೋಪದಡಿ ಎಫ್ಐಆರ್ ದಾಖಲಾಗಿದೆ. ಅಲ್ಲದೆ, ರಾಜಣ್ಣ ಎಂಬ ಇನ್ನೊರ್ವ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ.
ಅಕ್ರಮವಾಗಿ 23 ಸೈಟ್ಗಳನ್ನು ಮಾರಾಟ ಮಾಡುವ ಮೂಲಕ ವಂಚನೆ ಮಾಡಿದ್ದಾರೆ ಎಂದು ಕಂಪನಿಯ ಪಾಲುದಾರರಾದ ಪ್ರಭಾವತಿ ಎಂಬುವರು ಇಂದಿರಾನಗರ ಠಾಣೆಗೆ ನೀಡಿದ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಶಾಸಕನ ಪುತ್ರ, ಪತ್ನಿ ಸೇರಿ ಒಟ್ಟು ನಾಲ್ವರು ಕಂಪನಿ ಆರಂಭಿಸಿದ್ದರು. ಬಳಿಕ ಕಂಪನಿ ಹೆಸರಿನಲ್ಲಿ ಬಿದರಹಳ್ಳಿಯ ಬೊಮ್ಮನಹಳ್ಳಿಯಲ್ಲಿ ಲೇಔಟ್ ನಿರ್ಮಾಣ ಮಾಡಿದ್ದರು. ನಿರ್ಮಾಣದ ವೇಳೆ ನಾಲ್ವರು ಪಾಲುದಾರರ ನಡುವೆ ಒಪ್ಪಂದ ಆಗಿತ್ತು. ಸೈಟ್ ಹಂಚಿಕೆ ವೇಳೆ ಎಲ್ಲರ ಸಹಿ ಕಡ್ಡಾಯ ಎಂಬ ಒಪ್ಪಂದಕ್ಕೆ ಎಲ್ಲರು ಸಹಿ ಹಾಕಿದ್ದರು. ಇದೀಗ ಪ್ರಭಾವತಿ ಅವರನ್ನು ಬಿಟ್ಟು ಇನ್ನುಳಿದ ಮೂವರು ಸೈಟ್ ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ.
ಅಕ್ರಮವಾಗಿ ಬ್ಯಾಂಕ್ನಲ್ಲಿ ಖಾತೆ ತೆಗೆದು ವಂಚನೆ ಮಾಡಿರುವುದಾಗಿ ದೂರಿನಲ್ಲಿ ಪ್ರಭಾವತಿ ಅವರು ಉಲ್ಲೇಖಿಸಿದ್ದಾರೆ. ಸದ್ಯ ಮೂವರ ವಿರುದ್ಧ ಪ್ರಕರಣ ದಾಖಲಿಸಿರುವ ಇಂದಿರಾನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್)