ಚೆನ್ನೈ: ರಾಜಧಾನಿ ಚೆನ್ನೈ ಸೇರಿದಂತೆ ರಾಜ್ಯದ ಹಲವು ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಗೆ ತಮಿಳುನಾಡಿನಲ್ಲಿ ಪ್ರವಾಹ ಪತಿಸ್ಥಿತಿ ನಿರ್ಮಾಣವಾಗಿದೆ. ವಿಪತ್ತು ನಿರ್ವಹಣಾ ಇಲಾಖೆಯ ಪ್ರಕಾರ ಈ ಋತುವಿನ ಅತ್ಯಧಿಕ ಮಳೆಗೆ ತಮಿಳುನಾಡು ಸಾಕ್ಷಿಯಾಗಿದ್ದು, ಮುಂದಿನ ಕೆಲವು ದಿನಗಳವರೆಗೆ ಭಾರೀ ಮಳೆ ಮುಂದುವರಿದರೆ 2015ರ ಮಳೆಯ ದಾಖಲೆಗಳನ್ನು ಮೀರಿಸಲಿದೆ.
ಈಗಾಗಲೇ ಸೈಕ್ಲೋನ್ ಎಫೆಕ್ಟ್ ಎದುರಿಸಿರುವ ತಮಿಳುನಾಡು ಇದೀಗ ವರುಣನ ಅಬ್ಬರಕ್ಕೆ ತತ್ತರಿಸಿ ಹೋಗಿದೆ. ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿದೆ. ಒಂದೆಡೆ ಚಳಿಯ ಹೊಡೆತವಿದ್ದರೆ, ಮಳೆಯು ಬೆಂಕಿಗೆ ತುಪ್ಪ ಸುರಿದಂತಿದೆ. ಇದರಿಂದಾಗಿ ಜನರು ತೀವ್ರ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಮಡಿಪಕ್ಕಂನ ರಾಮ್ ನಗರದ ನಿವಾಸಿಯೊಬ್ಬರು, "ಇದು ಪುನರಾವರ್ತಿತ ಸಮಸ್ಯೆಯಾಗಿದೆ ಮತ್ತು ಇದು ವರ್ಷದಿಂದ ವರ್ಷಕ್ಕೆ ಸಂಭವಿಸುತ್ತಲೇ ಇದೆ ಆದರೆ, ಯಾವುದೇ ಸರ್ಕಾರ ಅಥವಾ ಅಧಿಕಾರಿ ಇದನ್ನು ಸರಿಪಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಳೆಯ ಹೊಡೆತಕ್ಕೆ ಮನೆ ಒಳಗೆ ಬೀಡುಬಿಡ್ಡಿರುವ ಹಿರಿಯ ನಾಗರಿಕರು ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ರಸ್ತೆಯುದ್ದಕ್ಕೂ ನೀರು ತುಂಬಿದೆ, ಹೊಂಡಗಳು ಸಹ ಕೂಡಿದ್ದು, ಪಾದಚಾರಿಗಳಿಗೆ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಅಪಾಯ ತಂದೊಡ್ಡಿದೆ. ಪಲ್ಲವರಂ ತೋರೈಪಕ್ಕಂ ರಸ್ತೆಯಲ್ಲಿ ಮೆಡವಕ್ಕಂನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಎಸ್ ಕೊಲತ್ತೂರ್ ನಿವಾಸಿಗಳು ಮಳೆ ನೀರಿನ ನಡುವೆಯೇ ರಸ್ತೆಯಲ್ಲೇ ಪ್ರತಿಭಟನೆ ನಡೆಸಿದರು. ಸುಮಾರು 30 ನಿಮಿಷಗಳ ಕಾಲ, ಥೋರೈಪಾಕ್ಕಂನ ಐಟಿ ಹಬ್‌ನಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತು. ಕಳೆದ ಆರೇಳು ವರ್ಷಗಳಿಂದ ನಮ್ಮ ಮನೆಗಳು ಪದೇಪದೆ ಜಲಾವೃತಗೊಳ್ಳುತ್ತಲೇ ಇವೆ. ಆದರೆ, ಏನೂ ಬದಲಾವಣೆ ಆಗುತ್ತಿಲ್ಲ. ಹೀಗಾಗಿ ನಮಗೆ ಪರಿಹಾರದ ಭರವಸೆ ನೀಡುವವರೆಗೆ ರಸ್ತೆಯಿಂದ ಕದಲುವುದಿಲ್ಲ ಎಂದು ನಿವಾಸಿಗಳು ಆಕ್ರೋಶ ಹೊರಹಾಕಿದರು.
200ಕ್ಕೂ ಹೆಚ್ಚು ಪ್ರದೇಶಗಳು ಜಲಾವೃತವಾಗಿದ್ದು, ಸುಮಾರು 30 ಕಡೆಗಳಲ್ಲಿ ನೀರು ತುಂಬಿದೆ ಎಂದು ಕಂದಾಯ ಮತ್ತು ವಿಪತ್ತು ನಿರ್ವಹಣೆಯ ಪ್ರಧಾನ ಕಾರ್ಯದರ್ಶಿ ಕುಮಾರ್ ಜಯಂತ್ ತಿಳಿಸಿದ್ದಾರೆ. ಮಳೆ ಹೀಗೆ ಮುಂದುವರಿದರೆ, 2015 ರಲ್ಲಿ ಒಂದೇ ತಿಂಗಳಲ್ಲಿ ಪಡೆದ ಮಳೆಯ ದಾಖಲೆಯನ್ನು ಮುರಿಯಲಿದೆ. ಈಗಾಗಲೇ ಸುಮಾರು 1000 ಮಿಮೀ ಮಳೆ ದಾಖಲಾಗಿದೆ ಮತ್ತು ಮುಂದಿನ ಕೆಲವು ದಿನಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ನಾವು ತೆರವುಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಸಾಧ್ಯವಾದಷ್ಟು ಹೆಚ್ಚಿನ ಸ್ಥಳಗಳಲ್ಲಿ ನೀರನ್ನು ಹೊರತೆಗೆಯಲು ಯತ್ನಿಸುತ್ತಿದ್ದೇವೆ. ಆದರೆ, ಮಳೆ ನಿರಂತರವಾಗಿ ಬೀಳುತ್ತಿರುವುದರಿಂದ ಕಾರ್ಯಾಚರಣೆ ಕಷ್ಟಕರವಾಗಿದೆ ಎಂದು ಕುಮಾರ್ ಜಯಂತ್ ಹೇಳಿದರು.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಚೆನ್ನೈ ನಗರದಾದ್ಯಂತ ಐಎಎಸ್ ಅಧಿಕಾರಿಗಳಾದ ಝೋನಲ್ ಮಾನಿಟರಿಂಗ್ ಅಧಿಕಾರಿಗಳನ್ನು ನಿಯೋಜಿಸಿದ್ದು, ಪ್ರವಾಹ ಪೀಡಿತ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ನವೆಂಬರ್ 30 ರವರೆಗೆ ಮಳೆ ಮುಂದುವರಿಯಲಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ.
ಚೆನ್ನೈ ಮತ್ತು ಅಕ್ಕಪಕ್ಕದ ಜಿಲ್ಲೆಗಳು ಪ್ರಸ್ತುತ ತೀವ್ರ ಪ್ರವಾಹವನ್ನು ಎದುರಿಸುತ್ತಿದ್ದು, ಮಳೆಯ ಹೀಗೆ ಮುಂದುವರಿದರೆ ಜನರಿಗೆ ಅತ್ಯಂತ ಕಷ್ಟಕರವಾಗಲಿದೆ. 2015 ರಲ್ಲಿ ಭಾರೀ ಪ್ರವಾಹದಿಂದ ಚೆನ್ನೈ ತತ್ತರಿಸಿ ಹೋಗಿತ್ತು. ಇಡೀ ಚೆನ್ನೈ ನಗರ ಜಲಾವೃತಗೊಂಡಿತ್ತು. ಸಾಕಷ್ಟು ಸಾವು ನೋವು ಸಂಭವಿಸಿತ್ತು. ಕೋಟ್ಯಂತರ ಆಸ್ತಿ ನಷ್ಟವಾಗಿತ್ತು. ಹೀಗಾಗಿ ಸರ್ಕಾರದ ಇದರಿಂದ ಏನು ಕಲಿತಿದೆ ಎಂಬುದು ಇದೀಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದಿದೆ.(ಏಜೆನ್ಸೀಸ್)