ನ್ಯೂಸ್

ರಾಖಿಗೆ ದುಬೈನಲ್ಲಿ ಮನೆ ಕೊಡಿಸಿದ ಮೈಸೂರಿನ ಬಾಯ್ ಫ್ರೆಂಡ್! ರಾಖಿ ಬಗ್ಗೆ ಆದಿಲ್​ ಹೇಳಿಕೆ ಕೇಳಿದ್ರೆ ದಂಗಾಗ್ತೀರಾ

ಮುಂಬೈ: ಪ್ರೀತಿ, ಪ್ರೇಮ ಹಾಗೂ ಮದುವೆ ವಿಚಾರದಲ್ಲಿ ಬಾಲಿವುಡ್​ ನಟಿ ರಾಖಿ ಸಾವಂತ್​ ಆಗ್ಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತಾರೆ. ಕೆಲವು ವರ್ಷಗಳ ಹಿಂದೆ ಸ್ವಯಂವರ ನಡೆಸಿ ತಾನು ಮದುವೆಯಾಗಿದ್ದೇನೆ ಎಂದಿದ್ದ ರಾಖಿ ನಂತರ ಇಲ್ಲ ಎಂದಿದ್ದೂ ಎಲ್ಲರಿಗೂ ಗೊತ್ತಿರುವ ವಿಚಾರ. ಇದಷ್ಟೇ ಅಲ್ಲದೇ ಕಳೆದ ವರ್ಷ ಮದುವೆಯಾದ ರಾಖಿ ಗಂಡನನ್ನು ಕೆಲಕಾಲ ಪರಿಚಯಿಸಿರಲೇ ಇರಲಿಲ್ಲ. ಹಿಂದಿಯಲ್ಲಿ ಪ್ರಸಾರವಾಗುವ ಜನಪ್ರಿಯ ಬಿಗ್​ ಬಾಸ್​ ಶೋ ಮೂಲಕ ನನ್ನ ಗಂಡ ಎಂದು ರಿತೇಶ್​ ಎಂಬುವರನ್ನು ಪರಿಚಯ ಮಾಡಿದ್ದರು. ಶೋ ಮುಗಿದ ಬೆನ್ನಲ್ಲೇ ಇಬ್ಬರು ಬೇರೆ ಬೇರೆಯಾಗಿ ಸುದ್ದಿಯಾಗಿದ್ದರು.

ಗಂಡನಿಂದ ಬೇರೆಯಾಗಿ ಕೆಲವು ದಿನಗಳಿಂದ ಮಾಧ್ಯಮಗಳಿಂದ ದೂರ ಉಳಿದಿದ್ದ ರಾಖಿ ಇತ್ತೀಚೆಗಷ್ಟೇ ತಮ್ಮ ಹೊಸ ಬಾಯ್​ಫ್ರೆಂಡ್​ ಅನ್ನು ಪರಿಚಯಿಸಿದ್ದಾರೆ. ಅಚ್ಚರಿಯ ಸಂಗತಿ ಏನೆಂದರೆ, ರಾಖಿ ಅವರ ಹೊಸ ಬಾಯ್​ಫ್ರೆಂಡ್​ ನಮ್ಮ ಕರ್ನಾಟಕದ ಮೈಸೂರಿನವರು. ಕಳೆದುಕೊಂಡ ಪ್ರೀತಿಯನ್ನು ಆದಿಲ್ ದುರ್ರಾನಿ​ ಮೂಲಕ ಮತ್ತೆ ಪಡೆದುಕೊಂಡಿರುವ ರಾಖಿ, ಸದ್ಯ ವೈಯಕ್ತಿಕ ಜೀವನದ ಖುಷಿಯ ಕ್ಷಣಗಳನ್ನು ಕಳೆಯುತ್ತಿದ್ದಾರೆ.

ಇತ್ತೀಚೆಗೆ ಮಾಧ್ಯಮದೊಂದಿಗೆ ಮಾತನಾಡಿದ ರಾಖಿ, ತನಗಾಗಿ ತನ್ನ ಬಾಯ್​ಫ್ರೆಂಡ್​ ದುಬೈನಲ್ಲಿ ಮನೆ ಖರೀದಿ ಮಾಡಿರುವುದಾಗಿಯೂ ಮತ್ತು ಆತನ ಕುಟುಂಬದ ಜತೆ ಭೇಟಿ ಮಾಡಿಸಿದ್ದಾಗಿಯೂ ಹೇಳಿಕೊಂಡಿದ್ದಾರೆ. ಆದಿಲ್​, ದುಬೈನಲ್ಲಿ ನನ್ನ ಹೆಸರಿನಲ್ಲಿ ಮನೆ ಖರೀದಿಸಿದ್ದಾರೆ. ಇತ್ತೀಚೆಗಷ್ಟೇ ನನಗೆ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ನಿಜವಾಗಿ ಹೇಳುತ್ತೇನೆ ಆತನ ಪ್ರೀತಿಯೇ ನನ್ನ ಸಂಪತ್ತು. ಆತನ ಪ್ರೀತಿ ನಿಜ. ಆತ ಪ್ರಾಮಾಣಿಕ. ಆತ ನನ್ನನ್ನು ಗಂಭೀರವಾಗಿ ಪರಿಗಣಿಸಿದ್ದಾನೆ. ಬೇರೆ ಯಾವ ವ್ಯಕ್ತಿ ತಾನೇ ತನ್ನ ಪ್ರೀತಿಯನ್ನು ತನ್ನ ಕುಟುಂಬಕ್ಕೆ ಇಷ್ಟು ಬೇಗ ಪರಿಚಯಿಸುತ್ತಾನೆ? ನೀವೇ ಹೇಳಿ ಎಂದರು.

ಇದೇ ಸಮಯದಲ್ಲಿ ಸಂದರ್ಶನದ ಭಾಗವಾಗಿದ್ದ ಆದಿಲ್, ತಮ್ಮ ಸಂಬಂಧವನ್ನು ಒಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ಯಲು ಇದು ಸಣ್ಣ ಆರಂಭ ಎಂದು ಹೇಳಿದರು. ರಾಖಿ ಸಾವಂತ್ ಅವರಲ್ಲಿ ಏನನ್ನು ಬದಲಾಯಿಸಲು ಬಯಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಆದಿಲ್​, ಹೆಚ್ಚೇನೂ ಇಲ್ಲ, ಕಡಿಮೆ ಗ್ಲಾಮರಸ್​ ಇರುವ ಮತ್ತು ದೇಹ ಮುಚ್ಚುವ ಉಡುಪುಗಳನ್ನು ಧರಿಸಬೇಕೆಂದು ಭಾವಿಸುತ್ತೇನೆ ಎಂದರು.

ನನಗೆ ರಾಖಿ ಅವರ ವೃತ್ತಿ ಜೀವನದ ಸಾಧನೆಗಳ ಬಗ್ಗೆ ಹೆಚ್ಚೇನು ತಿಳಿದಿಲ್ಲ. ಅವರ ಕೆಲವೊಂದಿಷ್ಟು ಕೆಲಸಗಳನ್ನು ನೋಡಿದ್ದೇನೆ. ತಮ್ಮ ಬಗ್ಗೆ ತಾವೇ ಸಂಪೂರ್ಣ ತಿಳಿಸಿದರು. ರಿತೇಶ್​ ಜತೆಗೆ ನಡೆದಿದ್ದ ಮದುವೆ ಹಾಗೂ ಅವರಿಂದ ದೂರವಾದ ಸಂಗತಿಯನ್ನು ಹೇಳಿದರು. ಇದಕ್ಕೂ ಮೊದಲು ಎಲ್ಲವೂ ತಿಳಿದಿರಲಿಲ್ಲ ಆದರೆ, ಈಗ ರಾಖಿ ಬಗ್ಗೆ ಎಲ್ಲವೂ ತಿಳಿದಿದೆ. ಟಿವಿ ಹಾಗೂ ಸಿನಿಮಾಗಳಲ್ಲಿ ನೋಡಿದ ರಾಖಿಗೂ ನಿಜವಾಗಿ ಇರುವ ರಾಖಿಗೂ ತುಂಬಾ ವ್ಯತ್ಯಾಸವಿದೆ. ಅವರು ಸರಳ ಹಾಗೂ ವಿನಮ್ರ ವ್ಯಕ್ತಿ ಮತ್ತು ಸಣ್ಣ ವಿಚಾರವನ್ನು ಸಂತೋಷ ಪಡುವ ವ್ಯಕ್ತಿತ್ವ. ಆದರೆ, ಸಾರ್ವಜನಿಕವಾಗಿ ಅದಕ್ಕೆ ವಿರುದ್ಧವಾಗಿ ಇಮೇಜ್​ ಇದೆ ಎಂದು ಹೇಳಿದರು.

ನಮ್ಮ ಸಂಬಂಧಕ್ಕೆ ಆದಿಲ್​ ಕುಟುಂಬ ವಿರುದ್ಧವಾಗಿದೆ. ನನ್ನ ಉಡುಗೆಯ ಶೈಲಿ ಅವರಿಗೆ ಇಷ್ಟವಾಗುವುದಿಲ್ಲ ಎಂದು ರಾಖಿ ತಿಳಿಸಿದರು. ಇತ್ತೀಚೆಗೆ ಇಬ್ಬರು ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಈ ವೇಳೆ ಮಾತನಾಡಿದ ರಾಖಿ, ಆದಿಲ್​ ಅವರ ಕುಟುಂಬಕ್ಕೆ ನನ್ನನ್ನು ಪರಿಚಯಿಸಲು ದುಬೈಗೆ ಕರೆದೊಯ್ಯುತ್ತಿದ್ದಾರೆ ಎಂದರು. (ಏಜೆನ್ಸೀಸ್​)