ನ್ಯೂಸ್

ರಾಹುಲ್​ ಗಾಂಧಿ ನೇತೃತ್ವದ ಕಾಂಗ್ರೆಸ್​ ನಿಯೋಗಕ್ಕೆ ಲಖೀಂಪುರ್​ ಖೇರಿ ಭೇಟಿಗೆ ಅನುಮತಿ ನಿರಾಕರಿಸಿದ ಯುಪಿ ಸರ್ಕಾರ

ನವದೆಹಲಿ: ರೈತರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ಸಾವು-ನೋವು ಸಂಭವಿಸಿರುವ ಉತ್ತರ ಪ್ರದೇಶದ ಲಖೀಂಪುರ್​ ಖೇರಿಗೆ ಭೇಟಿ ನೀಡಲು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದ ನಿಯೋಗಕ್ಕೆ ಸಿಎಂ ಯೋಗಿ ಆದಿತ್ಯನಾಥ್​ ನೇತೃತ್ವದ ಸರ್ಕಾರ ಅನುಮತಿ ನಿರಾಕರಿಸಿದೆ. ಘರ್ಷಣೆ ನಡೆದ ಪ್ರದೇಶದಲ್ಲಿ 144 ಸೆಕ್ಷನ್​ ಹೇರಿರುವುದರಿಂದ ಭೇಟಿಗೆ ನಿರಾಕರಿಸಿದೆ ಎಂದು ತಿಳಿದುಬಂದಿದೆ.

ರಾಹುಲ್​ ಗಾಂಧಿ ನೇತೃತ್ವದ ನಿಯೋಗದ ಭೇಟಿಗೆ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​ ಅನುಮತಿ ಕೇಳಿದ್ದರು. ಆದರೆ, ಅನುಮತಿಯನ್ನು ನಿರಾಕರಿಸಲಾಗಿದೆ. ಈಗಾಗಲೇ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದ ಪೊಲೀಸರು ವಶಕ್ಕೆ ಪಡೆದು ಸರ್ಕಾರಿ ಗೆಸ್ಟ್​ಹೌಸ್​ನಲ್ಲಿ ಗೃಹಬಂಧನದಲ್ಲಿ ಇರಿಸಿದ್ದಾರೆ. ಭಾನುವಾರ ಘಟನೆ ನಡೆದ ಬೆನ್ನಲ್ಲೇ ಘಟನಾ ಸ್ಥಳಕ್ಕೆ ಭೇಟಿ ನೀಡಲು ಪ್ರಿಯಾಂಕ ಬರುವಾಗ ಸೋಮವಾರ ಮುಂಜಾನೆಯೇ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾಂಗ್ರೆಸ್​ ನಾಯಕರುಗಳಾದ ಸಚಿನ್​ ಪೈಲಟ್​, ಚರಂಜಿತ್​ ಸಿಂಗ್​ ಚನ್ನಿ, ಭೂಪೇಶ್​ ಬಾಗೇಲ್​ ಮತ್ತು ಕೆ.ಸಿ. ವೇಣುಗೋಪಾಲ್​ ಸೇರಿದಂತೆ ರಾಹುಲ್​ ಗಾಂಧಿ ನೇತೃತ್ವದ ನಿಯೋಗ ಮಂಗಳವಾರ ಬೆಳಗ್ಗೆ ಲಖಿಂಪುರ್​ ಖೇರಿಯತ್ತ ಹೊರಡಬೇಕಿತ್ತು. ಆದರೆ, ಉತ್ತರ ಪ್ರದೇಶ ಸರ್ಕಾರ ಅನುಮತಿಯನ್ನು ನಿರಾಕರಿಸಿದೆ.

ಘಟನೆ ಹಿನ್ನೆಲೆ ಏನು?

ಭಾನುವಾರ ಲಖೀಂಪುರ್​ ಖೇರಿಯಲ್ಲಿ ರೈತರ ಗುಂಪೊಂದು ಕೇಂದ್ರ ಸಚಿವ ಅಜಯ್​ ಮಿಶ್ರ ಅವರ ಪುತ್ರ ಆಶಿಶ್​ ಮಿಶ್ರ ಅವರ ವಾಹನವನ್ನು ತಡೆದು ಪ್ರತಿಭಟನೆ ಮಾಡುವಾಗ ರೈತರ ಮೇಲೆ ಕಾರು ಹರಿಸಿರುವ ಆರೋಪ ಸಚಿವರ ಪುತ್ರರ ವಿರುದ್ಧ ಕೇಳಿಬಂದಿದೆ. ಈ ಘಟನೆಯಲ್ಲಿ ಸ್ಥಳದಲ್ಲೇ ನಾಲ್ವರು ರೈತರು ಮೃತಪಟ್ಟಿದ್ದಾರೆ. ಬಳಿಕ ಬಿಜೆಪಿ ಕಾರ್ಯಕರ್ತರು ಮತ್ತು ರೈತರ ನಡುವೆ ನಡೆದ ಘರ್ಷಣೆಯಲ್ಲಿ ಮತ್ತೆ ನಾಲ್ವರು ಮೃತಪಟ್ಟಿದ್ದಾರೆ.

ಕಾಂಗ್ರೆಸ್​ ಮಾತ್ರವಲ್ಲದೆ, ಆಮ್​ ಆದ್ಮಿ ಪಕ್ಷ (ಎಎಪಿ), ಸಮಾಜವಾದಿ ಪಾರ್ಟಿ ಮತ್ತು ಬಿಎಸ್​ಪಿ ಸೇರಿದಂತೆ ಮುಂತಾದ ಪ್ರತಿಪಕ್ಷಗಳನ್ನು ಸಹ ಉತ್ತರ ಪ್ರದೇಶದ ಸರ್ಕಾರ ಲಖೀಂಪುರ್​ ಖೇರಿಗೆ ಭೇಟಿ ನೀಡದಂತೆ ತಡದೆದಿದೆ ಎಂಬ ಆರೋಪ ಕೇಳಿಬಂದಿದೆ.

ಶಿವಸೇನಾ ನಾಯಕ ಸಂಜಯ್ ರಾವುತ್ ಅವರು ರಾಹುಲ್ ಗಾಂಧಿಯನ್ನು ಭೇಟಿಯಾಗಿ, ಲಖಿಂಪುರ್ ಖೇರಿ ಹಿಂಸಾಚಾರ ಮತ್ತು ಪ್ರಿಯಾಂಕಾ ಗಾಂಧಿಯವರನ್ನು ಇತರ ನಾಯಕರೊಂದಿಗೆ ಬಂಧನದಲ್ಲಿಟ್ಟಿರುವ ವಿಷಯದ ಕುರಿತು ಜಂಟಿ ವಿರೋಧದ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ. (ಏಜೆನ್ಸೀಸ್​)