ಮೈಸೂರು: ಗಾಯಗೊಂಡಿರುವ ಆನೆ ಮರಿಗೆ ಚಿಕಿತ್ಸೆ ನೀಡುವಂತೆ ಕಾಂಗ್ರೆಸ್ ನಾಯಕ ಹಾಗೂ ಕೇರಳದ ವಯನಾಡು ಸಂಸದ ರಾಹುಲ್ ಗಾಂಧಿ ಬರೆದಿದ್ದ ಮನವಿ ಪತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಂದಿಸಿ, ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ ಬೆನ್ನಲ್ಲೇ ಮರಿ ಆನೆಗೆ ಚಿಕಿತ್ಸೆ ದೊರೆತಿದೆ.
ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಆಯುಧ ಪೂಜೆ ಮತ್ತು ವಿಜಯದಶಮಿಯಂದು ತಮ್ಮ ಯಾತ್ರೆಗೆ ಎರಡು ದಿನಗಳ ಕಾಲ ಬ್ರೇಕ್ ಹಾಕಿ, ವಿಶ್ರಾಂತಿ ಸಮಯದಲ್ಲಿ ತಮ್ಮ ತಾಯಿ ಸೋನಿಯಾ ಗಾಂಧಿ ಜೊತೆ ಕಬಿನಿ ಹಿನ್ನಿರಿನಲ್ಲಿ ಸಫಾರಿಗೆ ತೆರಳಿದ್ದರು. ಈ ವೇಳೆ ತಾಯಿ ಆನೆ ಜೊತೆ ಮರಿ ಆನೆಯನ್ನು ನಿಂತಿದ್ದನ್ನು ರಾಹುಲ್ ಗಾಂಧಿ ಗಮನಿಸಿದರು. ಅಲ್ಲದೆ, ಮರಿ ಆನೆಯ ಸೊಂಡಿಲು ಮತ್ತು ಬಾಲದಲ್ಲಿ ಗಾಯಗಳಾಗಿರುವುದನ್ನು ಗಮನಿಸಿದ ರಾಹುಲ್, ಅದರ ಫೋಟೋ ಸೆರೆಹಿಡಿದು ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿ " ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿರುವ ಪುಟ್ಟ ಮರಿಯೊಂದಿಗೆ ಈ ಸುಂದರ ತಾಯಿ ಆನೆ ನೋಡಿ ನನಗೆ ತುಂಬಾ ಬೇಸರವಾಯಿತು" ಎಂದು ಬರೆದುಕೊಂಡಿದ್ದಾರೆ.
ಇಷ್ಟೇ ಅಲ್ಲದೆ, ಸಿಎಂ ಬೊಮ್ಮಾಯಿ ಅವರಿಗೆ ಪತ್ರವನ್ನು ಬರೆದು ಸೂಕ್ತ ಚಿಕಿತ್ಸೆ ನೀಡುವಂತೆ ರಾಹುಲ್ ಗಾಂಧಿ ಮನವಿ ಮಾಡಿಕೊಂಡಿದ್ದರು. ಮನವಿಗೆ ಸ್ಪಂದಿಸಿದ ಸಿಎಂ ಬೊಮ್ಮಾಯಿ, ನಿನ್ನೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದಾದ ಬೆನ್ನಲ್ಲೇ ಆನೆ ಮರಿಯನ್ನು ಸೆರೆಹಿಡಿದ ಅರಣ್ಯ ಇಲಾಖೆಯ ಸಿಬ್ಬಂದಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಗಾಯಗೊಂಡು ನರಳಾಡುತ್ತಿದ್ದ ಆನೆ ಮರಿ ಇದೀಗ ಕೊಂಚ ನಿರಾಳವಾಗಿದೆ. (ದಿಗ್ವಿಜಯ ನ್ಯೂಸ್)