ನ್ಯೂಸ್

ವಾಟ್ಸ್​ಆ್ಯಪ್​ ಸ್ಟೇಟಸ್​ ನೋಡಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಬಾಲಕಿ!

ಹೈದರಾಬಾದ್​: ಹುಡುಗನೊಬ್ಬನ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ತನ್ನ ಫೋಟೋ ನೋಡಿ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯ ಬೊಮ್ಮಲಾರಾಮರಾಮ ವಲಯದಲ್ಲಿ ನಡೆದಿದೆ.

ಈ ಘಟನೆ ಶುಕ್ರವಾರ ನಡೆದಿದ್ದು, ಮೃತಳನ್ನು ಶಿಲ್ಪಾ (14) ಎಂದು ಗುರುತಿಸಲಾಗಿದೆ. ಮೃತ ಬಾಲಕಿ ಬೊಯ್ನ್​ಪಲ್ಲಿ ಗ್ರಾಮದವಳು. ಈಕೆಯ ಪಾಲಕರು ಚಿಂತಲಪಲ್ಲಿ ವಲಯದ ಪೊಥರಾಮ ಗ್ರಾಮದ ತರಕಾರಿ ತೋಟವೊಂದರಲ್ಲಿ ಕೂಲಿಯಾಳಾಗಿದ್ದಾರೆ.

ಈ ಸಂದರ್ಭದಲ್ಲಿ ಬಾಲಕಿಗೆ ಅದೇ ಗ್ರಾಮದ ಬೊಟಿಮಿಡಿ ಗ್ಯಾಂಗ್​ ಸದಸ್ಯನಾದ ಮಧು ಎಂಬಾತನ ಪರಿಚಯವಾಗುತ್ತದೆ. ಇದಾದ ಬೆನ್ನಲ್ಲೇ ಆಕೆಯ ಫೋಟೋವನ್ನು ತನ್ನ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ಹಾಕುತ್ತಾನೆ. ಇಬ್ಬರ ನಡುವೆ ತುಂಬಾ ಸಲುಗೆ ಎಂದು ಬಿಂಬಿಸಲಾಗುತ್ತದೆ. ಇದರಿಂದ ಮನನೊಂದ ಬಾಲಕಿ ಇದೀಗ ಆತ್ಮಹತ್ಯೆ ದಾರಿ ಹಿಡಿದಿದ್ದಾಳೆ.

ಇದರ ಬೆನ್ನಲ್ಲೇ ಬಾಲಕಿಯ ತಾಯಿ ಜಯಮ್ಮ ಪೆಟ್ಟಾಹ್​ ಪೊಲೀಸ್​ ಠಾಣೆಯಲ್ಲಿ ಮಗಳ ಸಾವಿಗೆ ಮಧು ಕಾರಣ ಎಂದು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)