ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಡಾ. ಗುರುಪ್ರೀತ್ ಕೌರ್ ಗುರುವಾರ (ಜುಲೈ 7) ಸಪ್ತಪದಿ ತುಳಿದರು. ಚಂಡೀಗಢ್ನಲ್ಲಿರುವ ಭಗವಂತ್ ಮಾನ್ ಅವರ ನಿವಾಸದಲ್ಲಿ ಮದುವೆ ಸಮಾರಂಭ ಸರಳವಾಗಿ ನೆರವೇರಿತು.
ಎಎಪಿ ನಾಯಕ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಇದೊಂದು ಖಾಸಗಿ ಸಮಾರಂಭವಾಗಿದ್ದು, ಕೆಲವೇ ಗಣ್ಯರು ಹಾಗೂ ಎರಡು ಕುಟುಂಬಗಳ ಆಪ್ತರ ಸಮ್ಮುಖದಲ್ಲಿ ಭಗವಂತ್ ಮಾನ್ ಮತ್ತು ಗುರುಪ್ರೀತ್ ಕೌರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ವಧು ಗುರುಪ್ರೀತ್ ಕೌರ್ ಕಡುಗೆಂಪು ಬಣ್ಣದ ಲೆಹೆಂಗಾದಲ್ಲಿ ಕಂಗೊಳಿಸಿದರೆ, ಸಿಎಂ ಭಗವಂತ್ ಮಾನ್ ಅವರು ಹೊಂಬಣ್ಣದ ಶೆರ್ವಾನಿಯಲ್ಲಿ ಮಿಂಚಿದರು. ಮಾನ್ ಅವರು ಖಡ್ಗ ಹಿಡಿದು ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋವೊಂದು ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
48 ವರ್ಷದ ಮುಖ್ಯಮಂತ್ರಿ ಭಗವಂತ್ ಮಾನ್ ಈ ಹಿಂದೆ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿದ್ದರು. 6 ವರ್ಷಗಳ ಹಿಂದೆ ತಮ್ಮ ಮೊದಲ ಪತ್ನಿಯಿಂದ ಡಿವೋರ್ಸ್ ಪಡೆದುಕೊಂಡಿದ್ದಾರೆ. ಇದು ಅವರ ಎರಡನೇ ಮದುವೆಯಾಗಿದ್ದು, 32 ವರ್ಷದ ಗುರುಪ್ರೀತ್ ಕೌರ್ ಮತ್ತು 48 ವರ್ಷದ ಭಗವಂತ್ ಮಾನ್ ನಡುವೆ 16 ವರ್ಷಗಳ ವಯಸ್ಸಿನ ಅಂತರವಿದೆ.
ವೃತ್ತಿಯಲ್ಲಿ ವೈದ್ಯೆಯಾಗಿರುವ ಗುರುಪ್ರೀತ್ ಕೌರ್ ಕುರುಕ್ಷೇತ್ರ ಜಿಲ್ಲೆಯ ಪೆಹೊವಾ ಮೂಲದವರು. ಅವರ ತಂದೆ ಇಂದ್ರಜಿತ್ ಸಿಂಗ್ ಓರ್ವ ರೈತ. ಅವರ ತಾಯಿ ರಾಜ್ ಕೌರ್ ಗೃಹಿಣಿ. ಗುರುಪ್ರೀತ್ ಕೌರ್ಗೆ ಇಬ್ಬರು ಸಹೋದರಿಯರಿದ್ದಾರೆ. ಇಬ್ಬರು ಕೂಡ ವಿದೇಶದಲ್ಲಿದ್ದಾರೆ. ಮಾನ್ ಅವರ ನಿಕಟ ಮೂಲಗಳ ಪ್ರಕಾರ, ಎರಡೂ ಕುಟುಂಬಗಳ ನಡುವೆ ಹಲವು ವರ್ಷಗಳಿಂದ ಸಂಬಂಧ ಇದೆ.
ಹರಿಯಾಣದ ಮೌಲಾನಾದಲ್ಲಿರುವ ಮಹಾರಿಷಿ ಮಾರ್ಕಂಡೇಶ್ವರ್ ಮೆಡಿಕಲ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾಳೆ. ಆಕೆ ಚಿನ್ನದ ಪದಕ ವಿಜೇತೆ ಎಂದು ಅವರ ಅಂಕಲ್ ಗುರಿಂದರ್ ಜೀತ್ ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ನಾಯಕರಾದ ಭಗವಂತ್ ಮಾನ್, ಇತ್ತೀಚಿಗೆ ನಡೆದ ಪಂಜಾಬ್ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವನ್ನ ಗೆಲ್ಲಿಸಿಕೊಂಡು ದಾಖಲೆ ಬರೆದಿದ್ದರು. ಪಂಜಾಬ್ ವಿಧಾನಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ಗುರುಪ್ರೀತ್ ಅವರು ಭಗವಂತ್ ಮಾನ್ ಅವರಿಗೆ ಸಹಾಯ ಮಾಡಿದರು ಎಂದು ಮೂಲಗಳು ಹೇಳಿವೆ.
ಭಗವಂತ್ ಮಾನ್ ಅವರಿಗೆ ಈಗಾಗಲೇ ಇಂದ್ರಪ್ರೀತ್ ಕೌರ್ ಎಂಬುವರ ಜತೆ ಮದುವೆ ಆಗಿತ್ತು. ಇವರಿಬ್ಬರ ಸಂಬಂಧ 2015ರಲ್ಲಿ ವಿಚ್ಛೇದನ ಪಡೆಯುವ ಮೂಲಕ ಮುರಿದು ಬಿದ್ದಿತ್ತು. ಇವರ ಮಾಜಿ ಪತ್ನಿ ಹಾಗೂ ಮಕ್ಕಳು ಅಮೆರಿಕದಲ್ಲಿ ನೆಲೆಸಿದ್ದಾರೆ. 6 ವರ್ಷದಿಂದ ಏಕಾಂಗಿಯಾಗಿದ್ದ ಭಗವಂತ್ ಮಾನ್ ಅವರು ಇದೀಗ ಮತ್ತೊಂದು ಮದ್ವೆ ಆಗಿದ್ದಾರೆ. ತಾಯಿ ಹಾಗೂ ಸಹೋದರಿ ಇಬ್ಬರೂ ಮತ್ತೊಂದು ಮದ್ವೆ ಆಗಲು ಒಪ್ಪಿಸಿದ್ದಾರೆ. (ಏಜೆನ್ಸೀಸ್)