| ರಮೇಶ್ ಕುಮಾರ ಬಿ ಎಡಮೋಳೆ
ಬೆಂಗಳೂರು: ಅಸಂಖ್ಯಾತ ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿರುವ ಎಲ್ಲರ ಪ್ರೀತಿಯ ಅಪ್ಪು ಇಂದು ನಮ್ಮ ನಡುವೆ ಇಲ್ಲ ಎಂಬುದನ್ನು ಕಲ್ಪಿಸಿಕೊಳ್ಳಲು ಆಗುತ್ತಿಲ್ಲ. ಆ ನಗು, ಆ ಧ್ವನಿ, ಅವರ ಸರಳ ವ್ಯಕ್ತಿತ್ವ ಮತ್ತು ನೊಂದವರಿಗೆ ಸಹಾಯಾಸ್ತ ಚಾಚುವ ಗುಣ ಹಾಗೂ ಎಲ್ಲರ ಜೊತೆ ಪ್ರೀತಿಯಿಂದ ಬೆರೆಯುತ್ತಿದ್ದ ಪುನೀತ್ಗೆ ಪುನೀತನೇ ಸರಿಸಾಟಿ. ನಮ್ಮಿಂದ ಶಾರೀರಿಕವಾಗಿ ದೂರವಾಗಿರುವ ಪುನೀತ್, ಅವರು ಬಿಟ್ಟು ಹೋಗಿರುವ ಮೌಲ್ಯ, ಪ್ರೀತಿ ಹಾಗೂ ನಗುವಿನ ಮೂಲಕ ಶಾಶ್ವತವಾಗಿ ಉಳಿದಿದ್ದಾರೆ.
ಪ್ರತಿಯೊಂದು ಚಿತ್ರದಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಒಳ್ಳೆಯ ಸಂದೇಶ ನೀಡುತ್ತಿದ್ದ ಅಪ್ಪು ಕರ್ನಾಟಕದ ಮನೆ ಮಗನಾಗಿದ್ದಾರು. ಅಪ್ಪನ ನಡೆಯನ್ನೇ ಅನುಸರಿಸಿದ ಅಪ್ಪು ಎಲ್ಲರ ಹೃದಯದಲ್ಲೂ ಮನೆ ಮಾಡಿದ್ದರು. ಸಾಕಷ್ಟು ಅನಾಥಾಶ್ರಮ, ವೃದ್ಧಾಶ್ರಮ, ಹೆಣ್ಣು ಮಕ್ಕಳು ಶಿಕ್ಷಣ ಸೇರಿದಂತೆ ಲೆಕ್ಕವಿಲ್ಲದಷ್ಟು ಸಮಾಜಮುಖಿ ಕೆಲಸ ಮಾಡುತ್ತಿದ್ದ ಧೀಮಂತ ವ್ಯಕ್ತಿ ಇಂದು ನಮ್ಮ ಮುಂದೆ ಇಲ್ಲದಿರುವುದು, ಸಮಾಜಕ್ಕೆ ಆದ ಬಹು ದೊಡ್ಡ ನಷ್ಟವಾಗಿದೆ. ಕೆಲವರು ಪುನೀತ್ ಅವರಲ್ಲಿ ದೇವರನ್ನು ಕಂಡಿದ್ದಾರೆ. ಅಂತಹ ಮಹಾನ್ ಚೇತನ ಇಂದು ನಮ್ಮ ನಡುವೆ ಇಲ್ಲ ಎಂಬುದನ್ನು ನಿಜಕ್ಕೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಇದೊಂದು ಕನಸಾಗಿ ಬಿಡಲಿ ಎಂದು ಎಲ್ಲರೂ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿರುವುದಂತೂ ಸತ್ಯ.
ಇನ್ನು ಅಪ್ಪು ವ್ಯಕ್ತಿತ್ವ ಎಂಥದ್ದು ಎನ್ನುವುದನ್ನು ಅವರ "ರಾಜಕುಮಾರ" ಚಿತ್ರದ "ಬೊಂಬೆ ಹೇಳುತೈತೆ ನೀನೆ ರಾಜಕುಮಾರ" ಹಾಡು ಸಾರಿ ಸಾರಿ ಹೇಳುತ್ತದೆ. ಚಿತ್ರರಂಗದಲ್ಲಿ ರಾಜನಂತೆ ಮೆರೆದ ಅಪ್ಪು, ಎಷ್ಟೋ ಮನೆಗೆ ಹೊಸ ಬೆಳಕಾಗಿ, ಎಷ್ಟೋ ಮನಗಳ ನೋವ ನೀಗಿಸಿ ದೀಪವಾಗುವ ಮೂಲಕ ಎಲ್ಲರು ಆರಾಧಿಸುವ ರಾಜರತ್ನನಾಗಿದ್ದಾರೆ.
ಸಾಕಷ್ಟು ಸೋಲು-ಗೆಲುವುಗಳನ್ನು ಕಂಡಿರುವ ಪುನೀತ್, ಆಡಿಸಿಯೆ ನೋಡು ಬೀಳಿಸಿಯೆ ನೋಡು ಎಂದು ಸೋಲದು ಸೋತು ತಲೆಯ ಬಾಗದು ಎನ್ನುವಂತೆ ಜೀವನದಲ್ಲಿ ಎಂದು ಕುಗ್ಗಲಿಲ್ಲ. ವರ್ಷಕ್ಕೆ ಎರಡ್ಮೂರು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ಪುನೀತ್ ಈ ಮೂಲಕ ಪರೋಕ್ಷವಾಗಿ ಸಾಕಷ್ಟು ಜನರ ಜೀವನಕ್ಕೆ ಆಸರೆಯಾಗಿದ್ದರು. ಎಂದು ಯಾರ ಮುಂದೆಯು ಸೋಲದ ಪುನೀತ್, ಎಲ್ಲರ ರಾಜಕುಮಾರನೇ ಸರಿ.
ತಂದೆ ಮೇರು ನಟನಾದರೂ ಅಪ್ಪುಗೆ ಅದರ ಬಗ್ಗೆ ಅಹಂ ಎಂದೂ ಇರಲಿಲ್ಲ. ತುಂಬಾ ಸರಳ ವ್ಯಕ್ತಿಯಾದ ಪುನೀತ್, ಗುಡಿಸಲೇ ಆಗಲಿ, ಅರಮನೆ ಆಗಲಿ ಎಂದು ಆಟ ನಿಲ್ಲದು ಎನ್ನುವಂತೆ ಎಲ್ಲರೊಂದಿಗೆ ಬೆರೆತು ಸಾಮಾನ್ಯ ವ್ಯಕ್ತಿಯಂತೆ ಜೀವಿಸಿದವರು. ಅದಕ್ಕೆ ಉದಾಹರಣೆಯಾಗಿ ಕೆಲವೇ ದಿನಗಳ ಹಿಂದೆ ಡಾಕ್ಯುಮೆಂಟರಿ ಶೂಟಿಂಗ್ಗಾಗಿ ಕೊಪ್ಪಳದ ಅಂಜನಾದ್ರಿ ಪರ್ವತಕ್ಕೆ ಆಗಮಿಸಿದ ಪುನೀತ್, ಗಂಗಾವತಿ ಸಮೀಪದ ಹಳ್ಳಿಗಳಲ್ಲಿ ಸುತ್ತಾಟ ನಡೆಸಿ ಹಲವು ಊರುಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಪುನೀತ್ ಅವರು ಸಾಮಾನ್ಯರಂತೆ ನೆಲದ ಮೇಲೆ ಕುಳಿತು ಕುರಿಗಾಯಿಗಳು ನೀಡಿದ ಸಂಗಟಿ ಸವಿದು ಸಂಭ್ರಮಿಸಿದ್ದರು. ಇದಕ್ಕೆ ಸಂಬಂಧಪಟ್ಟ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ಪುನೀತ್ ಸರಳತೆ ಕಂಡು ಭಾವುಕರಾಗಿದ್ದರು.
ಹಿರಿಯರೆ ಇರಲಿ ಕಿರಿಯರೆ ಬರಲಿ ಬೇಧವ ತೋರದು ಎಂದು ಬೇಧ ತೋರದು ಎಂಬ ಸಾಲು ಅಪ್ಪು ವ್ಯಕ್ತಿತ್ವದಿಂದಲೇ ಹುಟ್ಟಿಕೊಂಡಿದೆ ಎಂದರೆ ತಪ್ಪಾಗಲಾರದು. ಯಾವುದೇ ಸಭೆ, ಸಮಾರಂಭಗಳಿಗೆ ಹೋದರು ಪುನೀತ್ ಹಿರಿಯರಿಗೆ ಗೌರವ ಸೂಚಿಸುತ್ತಿದ್ದರು. ತಮಗಿಂತ ಕಿರಿಯವರನ್ನು ಕೂಡ ಗೌರವ ಕೊಟ್ಟೆ ಮಾತನಾಡಿಸುತ್ತಿದ್ದರು. ನಾನೊಬ್ಬ ಸ್ಟಾರ್ ಎಂಬುದನ್ನು ಎಂದಿಗೂ ಜನರ ಮುಂದೆ ಅಪ್ಪು ತೋರಿಸಿಕೊಂಡವರಲ್ಲ.
ಪುನೀತ್ಗೆ ಯಾವುದರಲ್ಲೂ ಕಡಿಮೆ ಆಗಿರಲಿಲ್ಲ. ಸಾಕಷ್ಟು ಹಣವಿದ್ದರೂ ಅದನ್ನು ಮೀರಿಸುವಷ್ಟು ಹೃದಯ ಶ್ರೀಮಂತ್ರಿಕೆಯನ್ನು ಹೊಂದಿದ್ದರು. ಎಲ್ಲ ಇದ್ದು ಏನು ಇಲ್ಲದ ಹಾಗೆ ಬದುಕಿ ತೋರಿದಂತಹ ವ್ಯಕ್ತಿತ್ವ. ತೆರೆಯ ಹಿಂದೆ ಸಾಕಷ್ಟು ಸಮಾಜಮುಖಿ ಕೆಲಸ ಮಾಡಿದ ಅಪ್ಪು ಅವರದ್ದು ಆಕಾಶ ನೋಡದ ಕೈ. ಅವರಿದ್ದ ಕಡೆಯಲೆಲ್ಲ ಪ್ರೀತಿ ಹಂಚಿವುದೇ ಅವರ ಬೆಲೆ ಕಟ್ಟಲಾಗದ ಗುಣ.
ಜೊತೆಗಿರು ನೀನು ಅಪ್ಪನ ಹಾಗೆ, ಹಣ್ಣೆಲೆ ಕಾಯೊ ವಿನಯಿದಿ ಹೀಗೆ ಎಂಬಂತೆ ಹೆತ್ತ ಮಕ್ಕಳಿಂದ ದೂರಾದ ಅನೇಕ ಹಿರಿಯರಿಗೆ ಮಗ ಹಾಗೂ ತಂದೆಯ ಸ್ಥಾನದಲ್ಲಿ ನಿಂತು ಅವರ ಕೊನೆಯ ಕಾಲದ ಜೀವನ ಸುಖಮಯವಾಗಿಸಿದವರಲ್ಲಿ ಪುನೀತ್ ಒಂದು ಹೆಜ್ಜೆ ಮುಂದು. ಸಾಕಷ್ಟು ವೃದ್ಧಾಶ್ರಮ ಹಾಗೂ ಅನಾಥಾಶ್ರಮ ನಡೆಸುತ್ತಿರುವ ಪುನೀತ್ ಅನೇಕರ ಬಾಳಿನ ಭರವಸೆ ಆಗಿದ್ದರು.
ನಿಜಕ್ಕೂ ನಿನ್ನನು (ಪುನೀತ್) ಪಡೆದ ನಾವು ಪುನೀತರೇ.. ಸದಾ ಕಾಲ ನಗು ನಗುತ ಬಾಳು ಎಂದು ಹಾರೈಸಿದ ಅಸಂಖ್ಯಾತ ಅಭಿಮಾನಿಗಳ ಪ್ರಾರ್ಥನೆ ಫಲಿಸಲೇ ಇಲ್ಲ. ಅರ್ಧಕ್ಕೆ ಅನೇಕರನ್ನು ಅನಾಥರನ್ನಾಗಿ ಮಾಡಿ ಹೊರಟರು ಅಪ್ಪು. ನಿಜಕ್ಕೂ ಈ ಸಾವು ನ್ಯಾಯವೇ? ತಾನೆ ಉರಿದು ಮನೆಗೆ ಬೆಳಕು ಕೊಡುವ ದೀಪವಂತೆ ಬಹುತೇಕರ ಪಾಲಿಗೆ ಪುನೀತ್ ನಂದಾ ದೀಪವಾಗಿದ್ದರು. ಆದರೆ, ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು ನಿಂತಿದೆ ಮತ್ತು ಸಮಯದ ಸೂತ್ರ ಅವನದು (ದೇವರು) ಎನ್ನುವ ಮಾತು ಅಪ್ಪು ವಿಚಾರದಲ್ಲೂ ನಿಜವಾಯಿತು. ಆದರೆ, ಇನ್ನಷ್ಟು ವರ್ಷ ನಮ್ಮನ್ನು ರಂಜಿಸುತ್ತಾರೆ ಅಂದುಕೊಂಡಿದ್ದಾಗಲೇ ದೇವರು ಅವರ ಪಾತ್ರವನ್ನು ಮುಗಿಸಿ ಬೇಗ ಕರೆಸಿಕೊಂಡುಬಿಟ್ಟ. ಹೀಗಾಗಿಯೇ ಇಂದು ಅಸಂಖ್ಯಾತ ಜನರು ದೇವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಏನೇ ಆದರೂ ಬೊಂಬೆ ಹೇಳಿದ ಒಂದು ಮುತ್ತಿನ ಕಥೆಯಯಲ್ಲಿದ್ದ ರಾಜ, ಈ ರಾಜಕುಮಾರನೇ. ಯೋಗವು ಒಮ್ಮೆ ಬರುವುದು ನಮಗೆ, ಯೋಗ್ಯತೆ ಒಂದೆ ಉಳಿವುದು ಕೊನೆಗೆ ಎನ್ನುವಂತೆ ಲೆಕ್ಕವಿಲ್ಲದಷ್ಟು ಅಭಿಮಾನಿಗಳಲ್ಲಿ ಎಂದಿಗೂ ಆರದ ದೀಪವಾಗಿಯೇ ಅಪ್ಪು ಅಜರಾಮರವಾಗಿ ಉಳಿದುಕೊಂಡಿದ್ದಾರೆ. ಈ ಜಗತ್ತಿಗೆ ಸೂರ್ಯನು ಒಬ್ಬನೇ, ಚಂದ್ರನು ಒಬ್ಬನೇ ಕನ್ನಡ ಚಿತ್ರರಂಗಕ್ಕೆ ಈ ರಾಜನೂ ಒಬ್ಬನೇ. ಬೊಂಬೆ ಹೇಳುತೈತೆ ಮತ್ತೆ.... ಹೇಳುತೈತೆ ನೀನೆ ರಾಜಕುಮಾರ....
ಹಾಡಿನ ಸಂಪೂರ್ಣ ಸಾಲು
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ
ಹೊಸ ಬೆಳಕೊಂದು ಹೊಸಿಲಿಗೆ ಬಂದು
ಬೆಳಗಿದ ಮನೆಯ ಮನಗಳ ಇಂದು
ಆರಾಧಿಸೊ ರಾರಾಧಿಸೊ ರಾಜರತ್ನನು
ಆಡಿಸಿಯೆ ನೋಡು ಬೀಳಿಸಿಯೆ ನೋಡು
ಎಂದು ಸೋಲದು ಸೋತು ತಲೆಯ ಬಾಗದು
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ
ಗುಡಿಸಲೆ ಆಗಲಿ ಅರಮನೆ ಆಗಲಿ
ಆಟವೆ ನಿಲ್ಲದು
ಎಂದು ಆಟ ನಿಲ್ಲದು
ಹಿರಿಯರೆ ಇರಲಿ ಕಿರಿಯರೆ ಬರಲಿ
ಬೇಧವೆ ತೋ ರದು ಎಂದು ಬೇಧ ತೋರದು
ಎಲ್ಲ ಇದ್ದು ಏನು ಇಲ್ಲದ ಹಾಗೆ ಬದುಕಿರುವ
ಆಕಾಶ ನೋಡದ ಕೈಯ ನಿನದು
ಪ್ರೀತಿ ಹಂಚಿರುವ
ಜೊತೆಗಿರು ನೀನು ಅಪ್ಪನ ಹಾಗೆ
ಹಣ್ಣೆಲೆ ಕಾಯೊ ವಿನಯಿದಿ ಹೀಗೆ
ನಿನ್ನನು ಪಡೆದ ನಾವು ಪುನೀತ
ಬಾಳು ನಗು ನಗುತ
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ
ತಾನೆ ಉರಿದು ಮನೆಗೆ ಬೆಳಕು ಕೊಡುವ ದೀಪವಿದು
ನಂದಾ ದೀಪವೇ ಇದು
ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು
ಸಮಯದ ಸೂತ್ರ ಅವನದು
ಒಂದು ಮುತ್ತಿನ ಕಥೆಯ ಹೇಳಿತು ಈ ಬೊಂಬೆ
ಆ ಕಥೆಯಲ್ಲಿದ್ದ ರಾಜನಂಗೆ ನೀನು ಬಂದೆ
ಯೋಗವು ಒಮ್ಮೆ ಬರುವುದು ನಮಗೆ
ಯೋಗ್ಯತೆ ಒಂದೆ ಉಳಿವುದು ಕೊನೆಗ
ಸೂರ್ಯನೊಬ್ಬ ಚಂದ್ರನೊಬ್ಬ
ರಾಜನೂ ಒಬ್ಬ
ಈ ರಾಜನೂ ಒಬ್ಬ
ಆಡಿಸಿಯೆ ನೋ ಡು ಬೀಳಿಸಿಯೆ ನೋಡು
ಎಂದು ಸೋಲದು ಸೋತು ತಲೆಯ ಬಾಗದು
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ