ನ್ಯೂಸ್

ನಿರ್ಮಾಣ ಹಂತದ ಕಟ್ಟಡ ಕುಸಿದು ಐವರು ದುರಂತ ಸಾವು: ಸಂತಾಪ ಸೂಚಿಸಿದ ಪ್ರಧಾನಿ ಮೋದಿ

ಪುಣೆ: ನಿರ್ಮಾಣ ಹಂತದ ಕಟ್ಟಡ ಕುಸಿದು ಐವರು ಕಾರ್ಮಿಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಈ ಅವಘಡದಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿವೆ.

ಕಬ್ಬಿಣದ ಸರಳುಗಳನ್ನು ಅಳವಡಿಸುವ ವೇಳೆ ಹತ್ತು ಕಾರ್ಮಿಕರ ಮೇಲೆ ಕಟ್ಟಡವು ಹಠಾತ್ತನೆ ಕುಸಿದು ಸರಳುಗಳ ನಡುವೆ ಸಿಲುಕಿ ದುರಂತ ಸಂಭವಿಸಿದೆ ಎಂದು ಪುಣೆಯ ಅಗ್ನಿಶಾಮಕ ಅಧಿಕಾರಿ ಸುನೀಲ್​ ಗಿಲ್ಬಿಲ್​ ತಿಳಿಸಿದ್ದಾರೆ.

ಕಾರ್ಮಿಕರ ಸಾವಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ಪುಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಸಂಭವಿಸಿದ ದುರ್ಘಟನೆಯಿಂದ ಮನಸ್ಸಿಗೆ ನೋವಾಗಿದೆ. ಮೃತ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಈ ದುರ್ಘಟನೆಯಲ್ಲಿ ಗಾಯಗೊಂಡಿರುವ ಎಲ್ಲರೂ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

ಈ ಘಟನೆಯಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮಗಳು ಸರಿಯಾಗಿ ತೆಗೆದುಕೊಂಡಿಲ್ಲ ಎಂದು ಪ್ರಾಥಮಿಕ ವರದಿ ಸೂಚಿಸುತ್ತದೆ" ಎಂದು ಪುಣೆಯ ಪೊಲೀಸ್ ಉಪ ಪೊಲೀಸ್ ಆಯುಕ್ತ ರೋಹಿದಾಸ್ ಪವಾರ್ ಹೇಳಿದ್ದಾರೆ.

ಸ್ಥಳೀಯ ಶಾಸಕ ಸುನೀಲ್ ಟಿಂಗ್ರೆ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯಾಚರಣೆಯನ್ನು ವೀಕ್ಷಿಸಿದರು. "ಈ ಸೈಟ್‌ನಲ್ಲಿ ನಿರಂತರವಾಗಿ 24 ಗಂಟೆಗಳ ಕಾಲ ನಿರ್ಮಾಣ ಕೆಲಸ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ಕಾರ್ಮಿಕರು ಎಷ್ಟು ದಿನ ಕೆಲಸ ಮಾಡುತ್ತಿದ್ದಾರೆಂದು ನಮಗೆ ತಿಳಿದಿಲ್ಲ. ನಿರಂತರ ಕೆಲಸದ ಬಳಲಿಕೆಯು ಕೂಡ ಅನಾಹುತಕ್ಕೆ ಕಾರಣವಾಗಿರಬಹುದು. ಇಲ್ಲಿರುವ ಇತರ ಕಾರ್ಮಿಕರು ಮಾಹಿತಿ ನೀಡಿದ್ದಾರೆ. ಗಾಯಾಳುಗಳು ಬಿಹಾರ ಮೂಲದವರಾಗಿದ್ದಾರೆ ಎಂದು ಅವರು ಹೇಳಿದರು.

ಸದ್ಯ ಕುಸಿತಕ್ಕೆ ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)