ನವದೆಹಲಿ: ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ "ದಿ ಕಾಶ್ಮಿರ ಫೈಲ್ಸ್" ಸಿನಿಮಾ ಭರ್ಜರಿ ಪ್ರದರ್ಶನದೊಂದಿಗೆ ವ್ಯಾಪಕ ಚರ್ಚೆಗೂ ಕಾರಣವಾಗಿದೆ. 1990 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯ ಕುರಿತ ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದೆ. ಮಾರ್ಚ್ 11ರಂದು ಬಿಡುಗಡೆಯಾದ ಈ ಸಿನಿಮಾವನ್ನು ನೋಡಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಸಿನಿಮಾವನ್ನು ಟೀಕೆ ಮಾಡಿದ್ದಾರೆ. ಈ ಸಾಲಿಗೆ ನಟ ಹಾಗೂ ರಾಜಕಾರಣಿ ಪ್ರಕಾಶ್ ರಾಜ್ ಕೂಡ ಸೇರಿಕೊಂಡಿದ್ದಾರೆ.
ಪ್ರಕಾಶ್ ರಾಜ್ ಅವರು ಮಾಡಿರುವ ಟ್ವೀಟ್ ಇದೀಗ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಪ್ರಕಾಶ್ ರಾಜ್ ಮಾಡಿರುವ ಟ್ವೀಟ್ ಏನು ಅಂದರೆ, ಕಾಶ್ಮೀರ ಫೈಲ್ಸ್ ಚಿತ್ರವು ಹಳೆಯ ಗಾಯಗಳನ್ನು ವಾಸಿಮಾಡುತ್ತದೆಯೇ? ಅಥವಾ ಇದು ಹೆಚ್ಚು ಪ್ರಚೋದನಕಾರಿಯಾಗಿ ಮಾಡುತ್ತದೆಯೇ? ಅಥವಾ ದ್ವೇಷದ ಬೀಜಗಳನ್ನು ಬಿತ್ತುವುದೇ? ಜಸ್ಟ್ ಆಸ್ಕಿಂಗ್ ಎಂದು ಟ್ವೀಟ್ ಮಾಡಿದ್ದಾರೆ. ಟ್ವೀಟ್ ಜತೆಗೆ ಕಾಶ್ಮೀರ ಫೈಲ್ಸ್ ಚಿತ್ರ ವೀಕ್ಷಣೆ ಬಳಿಕ ಚಿತ್ರಮಂದಿರಲ್ಲಿ ವ್ಯಕ್ತಿಯೊರ್ವ ವೀಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ದೃಶ್ಯವಿದೆ. ಇದೀಗ ಪ್ರಕಾಶ್ ರಾಜ್ ಟ್ವೀಟ್ ಹಾಟ್ ಟಾಪಿಕ್ ಆಗಿದೆ.
ಸಾಕಷ್ಟು ಪರ-ವಿರೋಧದ ನಡುವೆಯೂ ಕಾಶ್ಮೀರ್ ಫೈಲ್ಸ್ ಸಿನಿಮಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕರ್ನಾಟಕ ಮಾತ್ರವಲ್ಲದೆ ಗುಜರಾತ್, ಹರಿಯಾಣ, ಮಧ್ಯಪ್ರದೇಶದ ರಾಜ್ಯಗಳಲ್ಲೂ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಪ್ರಧಾನಿ ಮೋದಿ ಅವರೂ ಮೆಚ್ಚುಗೆ ಸೂಚಿಸಿದ್ದಾರೆ. ಇದೀಗ, ದೇಶದೆಲ್ಲಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವ ”ದಿ ಕಾಶ್ಮೀರ್ ಫೈಲ್ಸ್” ಸಿನಿಮಾವನ್ನು ಕರ್ನಾಟಕದ ಸಚಿವರು, ಶಾಸಕರು ಕೂಡ ವೀಕ್ಷಣೆ ಮಾಡಿದ್ದಾರೆ. (ಏಜೆನ್ಸೀಸ್)