ನ್ಯೂಸ್

ಹಾಯ್​ ಗಯ್ಸ್​ ನೀವೇಕೆ ಒಮ್ಮೆ ಪ್ರಯತ್ನಿಸಬಾರದು...ಹೊಸ ವೇಷ ಹಾಕಿ ಪ್ರಧಾನಿ ಮೋದಿ ವ್ಯಂಗ್ಯವಾಡಿದ ಪ್ರಕಾಶ್​ ರಾಜ್!​

ಚೆನ್ನೈ: ಪ್ರಖ್ಯಾತ ಬಹುಭಾಷಾ ನಟ, ರಾಜಕಾರಣಿ, ನಿರ್ದೇಶಕ, ನಿರ್ಮಾಪಕ ಹಾಗೂ ನಿರೂಪಕ ಪ್ರಕಾಶ್​ ರಾಜ್ ಅವರು ಮತ್ತೊಮ್ಮೆ ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಹೊಸ ವೇಷ ಧರಿಸಿರುವ ಫೋಟೋವನ್ನು ಪೋಸ್ಟ್​ ಮಾಡಿ ಟ್ವೀಟ್​ ಮೂಲಕ ಪ್ರಧಾನಿ ಮೋದಿಯನ್ನು ಅಣಕಿಸಿದ್ದಾರೆ.

ಸ್ಥಳೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಕ್ಯಾಮೆರಾಗೆ ಪೋಸ್​ ನೀಡಿರುವ ಎರಡು ಫೋಟೋಗಳನ್ನು ಟ್ವಿಟರ್​ನಲ್ಲಿ ಪ್ರಕಾಶ್​ ರಾಜ್​ ಅವರು ಅಪ್​ಲೋಡ್​ ಮಾಡಿದ್ದಾರೆ. ಒಂದು ಫೋಟೋದಲ್ಲಿ ರಾಜಕಾರಣಿಗಳ ಶೈಲಿಯಲ್ಲಿ ಕೈಬೀಸುತ್ತಿರುವುದನ್ನು ಕಾಣಬಹುದಾಗಿದೆ.

ಫೋಟೋ ಕುರಿತು "ನಮ್ಮ ಸುಪ್ರೀಂ ಲೀಡರ್​ನಿಂದ ಸ್ಫೂರ್ತಿಗೊಂಡು ಇದನ್ನು ಧರಿಸಿದ್ದೇನೆ...ಹಾಯ್​ ಗಯ್ಸ್​ ನೀವೇಕೆ ಒಮ್ಮೆ ಇದನ್ನು ಪ್ರಯತ್ನಿಸಬಾರದು" ಎಂದು ಟ್ವೀಟ್​ ಮಾಡಿದ್ದಾರೆ. ಇಲ್ಲಿ ಪರೋಕ್ಷವಾಗಿ ಪ್ರಧಾನಿ ಮೋದಿ ಅವರನ್ನು ವ್ಯಂಗ್ಯವಾಡಿದ್ದಾರೆ.

ಪ್ರಕಾಶ್​ ಅವರು ಧರಿಸಿರುವುದು ನೇಪಾಳಿ ಶೈಲಿಯ ಉಡುಪಾಗಿದೆ. ಬಹುಶಃ ಇತ್ತೀಚೆಗಷ್ಟೇ ಪ್ರಧಾನಿ ಮೋದಿ ನೇಪಾಳಕ್ಕೆ ಭೇಟಿ ನೀಡಿದ್ದಾರೆ. ಅದನ್ನು ಅಣುಕಿಸುವ ಸಲುವಾಗಿ ಪ್ರಕಾಶ್​ ರಾಜ್​ ಈ ಟ್ವೀಟ್​ ಮಾಡಿರಬಹುದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್​ ಚರ್ಚೆಗೆ ಗ್ರಾಸವಾಗಿದ್ದು, ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಪ್ರಕಾಶ್​ ರಾಜ್​ ಅವರು ಇತ್ತೀಚೆಗಷ್ಟೇ ಬಿಡುಗಡೆಯಾದ ಪ್ಯಾನ್​ ಇಂಡಿಯಾ ಸಿನಿಮಾ ಕೆಜಿಎಫ್​ 2ನಲ್ಲಿ ಕಾಣಿಸಿಕೊಂಡಿದ್ದಾರೆ. ದಳಪತಿ ವಿಜಯ್ ಅವರ​ 66ನೇ ಚಿತ್ರದಲ್ಲೂ ಪ್ರಕಾಶ್​ ರಾಜ್​ ಇರಲಿದ್ದಾರೆ. ಜೂನ್​ 3ಕ್ಕೆ ಬಿಡುಗಡೆಯಾಗಲಿರುವ ಅದಿವಿ ಶೇಷ್​ ನಟನೆಯ ಹಾಗೂ ಮಹೇಶ್​ ಬಾಬು ನಿರ್ಮಾಣದ ಮೇಜರ್​ ಸಿನಿಮಾದಲ್ಲಿ ನಟಿಸಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಪ್ರಕಾಶ್​ ರಾಜ್​ ಅವರು ಬಿಜಿಯಾಗಿದ್ದಾರೆ. (ಏಜೆನ್ಸೀಸ್​)