ನ್ಯೂಸ್

ಭಾರತದ ಮಣ್ಣನ್ನು ಸ್ಪರ್ಶಿಸಿದ ಚೀತಾಗಳು! ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಸ್ವಾಗತಿಸಿದ ಪ್ರಧಾನಿ ಮೋದಿ

ನವದೆಹಲಿ: ನಮೀಬಿಯಾದಿಂದ ವಿಶೇಷ ವಿಮಾನ ಮೂಲಕ ಕರೆತರಲಾದ 8 ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮ ದಿನದ ವಿಶೇಷ ದಿನದಂದೇ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದಾರೆ.

ಬೋನಿನ ಬಾಗಿಲುಗಳನ್ನು ಯಂತ್ರದ ಸಹಾಯದೊಂದಿಗೆ ತೆರೆಯುವ ಮೂಲಕ ಪ್ರಧಾನಿ ಮೋದಿ ಅವರು ಚೀತಾಗಳನ್ನು ಭಾರತದ ಮಣ್ಣಿಗೆ ಬಿಟ್ಟರು. ಈ ವೇಳೆ ಸ್ವತಃ ಕ್ಯಾಮೆರಾದಲ್ಲಿ ಚೀತಾಗಳ ಫೋಟೋವನ್ನು ಮೋದಿ ಕ್ಲಿಕ್ಕಿಸಿದರು.

ಸುಮಾರು 70 ವರ್ಷಗಳ ಹಿಂದೆ ಅಳಿದು ಹೋಗಿದ್ದ ಚೀತಾ ಸಂತತಿ ಭಾರತಕ್ಕೆ ಮತ್ತೆ ಮರಳಿದೆ. ನಮೀಬಿಯಾದಿಂದ ವಿಶೇಷ ವಿಮಾನದಲ್ಲಿ ಹಾರಿದ 8 ಚೀತಾಗಳು ಇಂದು ಬೆಳಗ್ಗೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿರುವ ವಾಯುಪಡೆಯ ವಿಮಾನ ನಿಲ್ದಾಣಕ್ಕೆ ಬಂದಿಳಿದವು.

ನಮೀಬಿಯಾ ರಾಜಧಾನಿ ವಿಂಡ್ಹೋಕ್​ನಿಂದ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬಿ747 ಜಂಬೋ ಜೆಟ್​ನಿಂದ 8 ಚೀತಾಗಳನ್ನು ಕರೆತರಲಾಗಿದೆ. 8ರಲ್ಲಿ 5 ಚೀತಾ ಹೆಣ್ಣು ಮತ್ತು 3 ಚೀತಾ ಗಂಡು. ಭಾರತಕ್ಕೆ ಆಗಮಿಸಿದ ಈ ವಿಶೇಷ ಅತಿಥಿಗಳನ್ನು ಪ್ರಧಾನಿ ಮೋದಿ ಅವರು ತಮ್ಮ ಹುಟ್ಟುಹಬ್ಬದಂದೇ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಅರ್ಪಿಸಿದ್ದಾರೆ.

ಹಿನ್ನೆಲೆ: ಭಾರತದಲ್ಲಿ ಚೀತಾಗಳ ಸಂಖ್ಯೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ನಮೀಬಿಯಾ ದೇಶದಿಂದ ಚೀತಾಗಳನ್ನು ಕರೆತರಲಾಗಿದೆ. ಇದಕ್ಕಾಗಿ ನಮೀಬಿಯಾ ದೇಶದಿಂದ ಚೀತಾಗಳನ್ನು ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಲಾಗಿತ್ತು. ಈ ಪ್ರಯತ್ನದ ಫಲವಾಗಿ ಇದೀಗ ಭಾರತಕ್ಕೆ ಮೊದಲ ಹಂತದಲ್ಲಿ 8 ಚೀತಾಗಳು ಬಂದಿವೆ. (ಏಜೆನ್ಸೀಸ್​)