ನ್ಯೂಸ್

ವಿಮಾನ ಲ್ಯಾಂಡ್​ ಆಗುವ ಸಮಯದಲ್ಲೇ ನಿದ್ರೆಗೆ ಜಾರಿದ ಇಬ್ಬರು ಪೈಲಟ್​ಗಳು: ಮುಂದೇನಾಯ್ತು?

ಅಡಿಸ್ ಅಬಾಬ: ವಿಮಾನ ಹಾರಾಟದ ವೇಳೆ ಇಬ್ಬರು ಪೈಲಟ್​ ನಿದ್ರೆಗೆ ಜಾರಿದ ಪರಿಣಾಮ ಸುಡಾನ್​ನಿಂದ ಇಥೋಪಿಯಾಗೆ ತೆರಳುವಾಗ ಲ್ಯಾಂಡಿಂಗ್​​ ತಪ್ಪಿಸಿಕೊಂಡ ವಿರಾಳಾತಿವಿರಳ ಘಟನೆ ಬೆಳಕಿಗೆ ಬಂದಿದೆ.

ಇಂಥದ್ದೊಂದು ಆಘಾತಕಾರಿ ವಿದ್ಯಾಮಾನಕ್ಕೆ ಇಥೋಪಿಯನ್​ ಏರ್​ಲೈನ್ಸ್​ ಬೋಯಿಂಗ್​ 737-800 ವಿಮಾನ ಸಾಕ್ಷಿಯಾಗಿದೆ. ವಿಮಾನವು ಸುಡಾನ್​ನ ಖರ್ತೌಮ್​ನಿಂದ ಇಥೋಪಿಯಾ ರಾಜಧಾನಿ ಅಡಿಸ್​ ಅಬಾಬಗೆ ತೆರಳುತ್ತಿತ್ತು. ಸುಮಾರು 37 ಸಾವಿರ ಅಡಿ ಎತ್ತರದಲ್ಲಿ ಆಟೋಪೈಲಟ್​ ಮೋಡ್​ನಲ್ಲಿ ಹಾರಾಟ ನಡೆಸುತ್ತಿತ್ತು. ಆಗಸ್ಟ್​ 15ರಂದು ಅಡಿಸ್ ಅಬಾಬದ ಬೊಲೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್​ ಆಗಬೇಕಿತ್ತು. ಆದರೆ, ನಿಗದಿತ ಸಮಯದಲ್ಲಿ ವಿಮಾನ ಇಳಿಯಲೇ ಇಲ್ಲ.

ಯಾವಾಗ ವಿಮಾನ ಇಳಿಯಲಿಲ್ಲವೋ ಗಾಬರಿಗೊಂಡ ಏರ್​ ಟ್ರಾಫಿಕ್​ ಕಂಟ್ರೋಲ್​ ಸಿಬ್ಬಂದಿ ವಿಮಾನದ ಪೈಲಟ್​ಗಳನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಅನೇಕ ಬಾರಿ ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಸಿಗುವುದಿಲ್ಲ. ಆದಾಗ್ಯೂ ಇಳಿಯಬೇಕಾದ ರನ್​ವೇ ಬಿಟ್ಟು ವಿಮಾನ ಮುಂದಕ್ಕೆ ಸಾಗಿದ್ದರಿಂದ ಎಚ್ಚರಿಕೆ ಗಂಟೆ ಬಡಿದುಕೊಳ್ಳುತ್ತದೆ. ಇದರಿಂದಾಗಿ ಪೈಲಟ್​​ಗಳಿಗೆ ಎಚ್ಚರವಾಗುತ್ತದೆ. ಸುಮಾರು 25 ನಿಮಿಷಗಳು ತಡವಾಗಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್​ ಆಗುತ್ತದೆ.

ಕರ್ತವ್ಯ ಲೋಪ ಎಸಗಿದ ಪೈಲಟ್​ಗಳಿಬ್ಬರ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಇಥೋಪಿಯಾ ಏರ್​ಲೈನ್ಸ್​ ಮಾಧ್ಯಮ ಹೇಳಿಕೆ ನೀಡಿದೆ. ಅದೃಷ್ಟವಶಾತ್​ ಪೈಲಟ್​​ಗಳ ನಿರ್ಲಕ್ಷ್ಯದಿಂದ ಸಂಭವಿಸುತ್ತಿದ್ದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. (ಏಜೆನ್ಸೀಸ್​)​