ಲಾಹೋರ್: ಸಾಮಾಜಿಕ ಜಾಲತಾಣದಲ್ಲಿ ಆಘಾತಕಾರಿ ವಿಡಿಯೋವೊಂದು ಹರಿದಾಡುತ್ತಿದ್ದು, ಅದರಲ್ಲಿ ಪಾಕಿಸ್ತಾನಿ ಮಹಿಳಾ ಟಿಕ್ಟಾಕರ್ ಮೇಲೆ ನೂರಾರು ಅಪರಿಚಿತ ಪಾಕ್ ವ್ಯಕ್ತಿಗಳು ದೌರ್ಜನ್ಯ ಎಸಗಿರುವ ದೃಶ್ಯವಿದೆ.
ಈ ಘಟನೆ ರಾಜಧಾನಿ ಲಾಹೋರ್ನಲ್ಲಿರುವ ಗ್ರೇಟರ್ ಇಕ್ಬಾಲ್ ಪಾರ್ಕ್ನಲ್ಲಿ ಆಗಸ್ಟ್ 14ರ ಪಾಕ್ ಸ್ವಾತಂತ್ರ್ಯ ದಿನದಂದು ನಡೆದಿರುವುದಾಗಿ ತಿಳಿದುಬಂದಿದೆ. ನೂರಾರು ಮಂದಿ ತನ್ನ ಬಟ್ಟೆಯನ್ನು ಹರಿದುಹಾಕಿ, ಗಾಳಿಯಲ್ಲಿ ಎಸೆದರು ಎಂದು ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾಳೆ.
ಎಫ್ಐಆರ್ ಅನ್ನು ಪಾಕ್ನ ಡಾನ್ ಮಾಧ್ಯಮ ವರದಿ ಮಾಡಿದೆ. ನನ್ನ ಆರು ಮಂದಿ ಒಡನಾಡಿಗಳ ಜತೆ ಸ್ವಾಂತತ್ರ್ಯ ದಿನದಂದು ಮಿನಾರ್ ಇ ಪಾಕಿಸ್ತಾನ್ ಬಳಿ ವಿಡಿಯೋ ಮಾಡುತ್ತಿದ್ದೆ. ಈ ವೇಳೆ ನಮ್ಮ ಮೇಲೆ ಏಕಾಏಕಿ ಸುಮಾರು 300 ರಿಂದ 400 ಮಂದಿ ದಾಳಿ ಮಾಡಿದರು. ನಾವು ಅವರಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದಾದರೂ ಅದು ಸಾಧ್ಯವಾಗಲಿಲ್ಲ. ಈ ಪರಿಸ್ಥಿತಿಯನ್ನು ಗಮನಿಸಿದ ಪಾರ್ಕ್ನ ಸೆಕ್ಯುರಿಟಿ ಗಾರ್ಡ್ ಎಲ್ಲ ಗೇಟ್ ಅನ್ನು ತೆರೆದರು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಡಿಯೋದಲ್ಲಿ ಮೃಗೀಯವಾಗಿ ವರ್ತಿಸಿರುವ ಜನರ ಬಗ್ಗೆ ನೆಟ್ಟಿಗರು ಆಕ್ರೋಶವನ್ನು ಹೊರಹಾಕಿದ್ದಾರೆ. ಭಾರೀ ಸಂಖ್ಯೆಯ ಜನರು ಪಾರ್ಕಿನ ಆವರಣವನ್ನು ಸುತ್ತುವರಿದು ನಮ್ಮತ್ತ ಬರುತ್ತಿದ್ದರು. ಹತ್ತಿರಬಂದವರು ನನ್ನು ತಳ್ಳಿ ಎಳೆದಾಡಿದರು. ಅಲ್ಲದೆ, ನನ್ನ ಬಟ್ಟೆಯನ್ನು ಹರಿದು ಹಾಕಿದರು. ಅನೇಕರು ನನಗೆ ಸಹಾಯ ಮಾಡಲು ಯತ್ನಿಸಿದರು. ಆದರೆ, ಸಾಧ್ಯವಾಗಲಿಲ್ಲ. ಜನಜಂಗುಳಿಯಲ್ಲಿ ನನ್ನನ್ನು ಮೇಲಕ್ಕೆ ಎತ್ತಿ ಗಾಳಿಯಲ್ಲಿ ಎಸೆದರು. ಇದೇ ಸಂದರ್ಭದಲ್ಲಿ ನನ್ನ ಒಡನಾಡಿಗಳ ಮೇಲೆಯೂ ಹಲ್ಲೆ ಮಾಡಿದ್ದಾರೆಂದು ಸಂತ್ರಸ್ತೆ ಆರೋಪ ಮಾಡಿದ್ದಾಳೆ.
ಈ ಘಟನೆಯನ್ನು ಖಂಡಿಸಿರುವ ಪಾಕ್ ನಟಿ ಮಹಿರಾ ಖಾನ್, ವಿಡಿಯೋ ನೋಡಿ ನನಗೆ ನಂಬಲು ಸಾಧ್ಯವಾಗಲಿಲ್ಲ. ನಾನು ಮುಂಚೆಯೇ ಹೇಳಿದ್ದೆ ಹಾಗೂ ನಾನದನ್ನು ಮತ್ತೊಮ್ಮೆ ಹೇಳುತ್ತಿದ್ದೇನೆ. ಇಂತಹ ಪುರಷರು ಯಾವ ಉದಾಹರಣೆ ಸೆಟ್ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಘಟನೆ ಬಗ್ಗೆ ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆಯ ಉಂಗುರ ಮತ್ತು ಕಿವಿಯೋಲೆಯನ್ನು ಕಿತ್ತುಕೊಂಡಿದ್ದಾರೆ ಮತ್ತು ಆಕೆಯ ಫ್ರೆಂಡ್ಸ್ ಒಬ್ಬರ ಮೊಬೈಲ್, ಗುರುತಿನ ಚೀಟಿ ಮತ್ತು 15 ಸಾವಿರ ರೂ. ಹಣವನ್ನು ಗುಂಪಿನಲ್ಲಿ ಕಸಿದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. (ಏಜೆನ್ಸೀಸ್)