ನ್ಯೂಸ್

ಫನ್​ ಬಕೆಟ್​ ಭಾರ್ಗವನೊಂದಿಗಿನ ಸಂಬಂಧ ಬಿಚ್ಚಿಟ್ಟು ಭಾವುಕಳಾದ ಓ ಮೈ ಗಾಡ್​ ಗರ್ಲ್​ ನಿತ್ಯಾ..!

ವಿಜಯವಾಡ: ಬಾಲಕಿಯನ್ನು ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿದ ಆರೋಪದಲ್ಲಿ ವಿಶಾಖಪಟ್ಟಣಂ ಪೊಲೀಸರಿಂದ ಟಿಕ್​ಟಾಕ್​ ಸ್ಟಾರ್​ ಫನ್​ ಬಕೆಟ್​ ಭಾರ್ಗವ ಬಂಧನವಾಗಿರುವುದು ಆಂಧ್ರ ಮತ್ತು ತೆಲಂಗಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಆರೋಪಿ ಭಾರ್ಗವ ಜತೆ ಅತಿ ಹೆಚ್ಚು ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದ "ಓ ಮೈ ಗಾಡ್​ ಗರ್ಲ್​​" ಖ್ಯಾತಿಯ ನಿತ್ಯಾ, ಭಾರ್ಗವ ಬಂಧನ ಬೆನ್ನಲ್ಲೇ ತನ್ನ ತಾಯಿಯ ಜತೆ ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ್ದಳು.

ಇದೀಗ ಮತ್ತೊಮ್ಮೆ ಇನ್​ಸ್ಟಾಗ್ರಾಂ ಲೈವ್​ ಮೂಲಕ ಕೆಲವು ವಿಚಾರಗಳನ್ನು ಮತ್ತೆ ಪ್ರಸ್ತಾಪಿಸಿರುವ ನಿತ್ಯಾ, ಸಾಮಾಜಿಕ ಜಾಲತಾಣದಲ್ಲಿ ತನ್ನ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳನ್ನು ನೋಡಿ ಕೊಂಚ ಭಾವುಕರಾಗಿದ್ದಾರೆ.

ಈಗಾಗಲೇ ಪ್ರಕರಣ ಸಂಬಂಧ ಒಂದು ವಿಡಿಯೋ ಮಾಡಿದ ಸ್ಪಷ್ಟನೆ ಸಹ ನೀಡಿದ್ದೇನೆ. ಈಗ ಮತ್ತೊಮ್ಮೆ ಹೇಳುತ್ತೇನೆ. ಭಾರ್ಗವ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಪ್ರಕರಣದಿಂದ ನನಗೇನು ಆಗಿಲ್ಲ. ನಾನು ಖುಷಿಯಾಗಿಯೇ ಇದ್ದೇನೆ. ಇಂತಹ ಸಂದರ್ಭದಲ್ಲಿ ನನಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಇದುವರೆಗೂ ಇಂತಹ ಬೆಂಬಲ ನನಗೆ ಸಿಕ್ಕಿಲ್ಲ. ನಿಮಗೆಲ್ಲರಿಗೂ ತುಂಬಾ ಧನ್ಯವಾದಗಳು ಎಂದು ನಿತ್ಯಾ ತಿಳಿಸಿದ್ದಾರೆ.

ನಾನು ಈ ಲೈವ್​ಗೆ ಬರುವುದಕ್ಕೆ ಕಾರಣವೇನೆಂದರೆ, ಅನೇಕರು ಇನ್ನು ಕೂಡ ನನ್ನನ್ನು ಪ್ರಶ್ನೆ ಮಾಡುತ್ತಿದ್ದಾರೆ. ಹೀಗಾಗಿ ಸ್ಪಷ್ಟನೆ ನೀಡೋಣ ಅಂತಾ ಲೈವ್​ಗೆ ಬಂದೆ. ನನಗು ಮತ್ತು ಭಾರ್ಗವನಿಗೂ ಇರುವ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಲು ಲೈವ್​ ಮಾಡುತ್ತಿದ್ದೇನೆ. 2019ರಲ್ಲಿ ಭಾರ್ಗವ ನನಗೆ ಪರಿಚಯವಾದ. ಇನ್​ಸ್ಟಾಗ್ರಾಂನಲ್ಲಿ ಭಾರ್ಗವ ಮತ್ತು ನನಗು ಸುಮಂತ್​ ಅಂತ ಕಾಮನ್ ಫ್ರೆಂಡ್​ ಇದ್ದಾರೆ. ಸುಮಂತ್​ ಕಾಮೆಂಟ್​ ಮಾಡಿದಾಗಲೆಲ್ಲ ನನ್ನನ್ನು ಟ್ಯಾಗ್​ ಮಾಡುತ್ತಿದ್ದರು. ಹೀಗೆ ಭಾರ್ಗವ ಪರಿಚಯವಾಯಿತು. ಬಳಿಕ ಭೇಟಿಯಾದೆವು. ಭಾರ್ಗವನೇ ಒಟ್ಟಿಗೆ ವಿಡಿಯೋ ಮಾಡುವುದರ ಬಗ್ಗೆ ಮೊದಲು ಕೇಳಿದರು. ಫ್ರೆಂಡ್ಸ್​ ಎಂದು ಒಪ್ಪಿಕೊಂಡು, ಆರಂಭದಲ್ಲಿ ಮೂರು ವಿಡಿಯೋ ಮಾಡಿದೆವು. ಅದಕ್ಕೆ ಜನರಿಂದ ಬಂದ ಸಖತ್​ ರೆಸ್ಪಾನ್ಸ್​ ನೋಡಿ ನಿಜಕ್ಕೂ ನಮಗೆ ಆಶ್ಚರ್ಯವಾಯಿತು. ಇದಾದ ಬಳಿಕ ಮತ್ತೆ ಹತ್ತು ವಿಡಿಯೋ ಮಾಡೋಣ ಎಂದು ಕೇಳಿಕೊಂಡ. ಒಳ್ಳೆಯ ರೆಸ್ಪಾನ್ಸ್​ ಇದ್ದಿದ್ದರಿಂದ ನಾನು ಒಪ್ಪಿಕೊಂಡೆ ಎಂದು ನಿತ್ಯಾ ಹೇಳಿದ್ದಾರೆ.

ಬಳಿಕ ಮಾಡಿದ ಹತ್ತು ವಿಡಿಯೋಗೂ ಸಹ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿ, ನಮಗೆ ಮತ್ತಷ್ಟು ಖ್ಯಾತಿಯನ್ನು ತಂದುಕೊಟ್ಟಿತು. ಆತ ಮಾಡುತ್ತಿದ್ದ ವಿಡಿಯೋ ಮಾದರಿ ನನಗೆ ಇಷ್ಟವಿರಲಿಲ್ಲ. ಆದರೆ, ನಟಿಯಾಗಬೇಕು ಎಂಬ ಆಸೆ ಇದ್ದಿದ್ದರಿಂದ ಕಷ್ಟ ಅನಿಸಿದರು ಎಲ್ಲವನ್ನು ಒಪ್ಪಿಕೊಂಡು ವಿಡಿಯೋ ಮಾಡಿದೆ. ಎಲ್ಲವೂ ಆತನು ಕೇಳಿದಂತೆಯೇ ನಾನು ಮಾಡಿದ್ದೇನೆ. ಇಲ್ಲಿ ನನ್ನ ಸ್ವಇಚ್ಛೆ ಏನು ಇಲ್ಲ. ಕೇವಲ 7 ರಿಂದ 8 ತಿಂಗಳು ಮಾತ್ರ ನಾವು ಕೆಲಸ ಮಾಡಿದ್ದೇವೆ. ಅದು ಕೂಡ ವೀಕೆಂಡ್​ನಲ್ಲಿ ಮಾತ್ರ ವಿಡಿಯೋ ಮಾಡುತ್ತಿದ್ದೆವು. ನಾನು ಶಾಲೆಗೆ ಹೋಗಾಬೇಕಾಗಿದ್ದರಿಂದ ನನಗೆ ಹೆಚ್ಚಿನ ಸಮಯ ಇರಲಿಲ್ಲ. ವೀಕೆಂಡ್​ನಲ್ಲಿ ಮಾತ್ರ ಒಂದೆರೆಡೆ ವಿಡಿಯೋ ಮಾಡುತ್ತಿದ್ದೆ. ಸಾಕಷ್ಟು ರೆಸ್ಪಾನ್ಸ್​ ಬರುತ್ತಿತ್ತು ಎಂದು ನಿತ್ಯಾ ತಿಳಿಸಿದ್ದಾರೆ.

ಟಿಕ್​ಟಾಕ್​ ಬ್ಯಾನ್​ ಆದ ನಂತರ ವಿಡಿಯೋ ಚಟುವಟಿಕೆಯಿಂದ ಕೊಂಚ ದೂರವಾದೆವು. ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ನಡುವೆ ಯಾವುದೇ ಸಮಸ್ಯೆಯೇ ಇಲ್ಲ. ಚೆನ್ನಾಗಿಯೇ ಇದ್ದೆವು. ತಂಗಿ ಎಂದೇ ಕರೆಯುತ್ತಿದ್ದ. ನಾನು ಸಹ ಅಣ್ಣಯ್ಯ ಎಂದು ಕರೆಯುತ್ತಿದ್ದೆ. ಮನೆಗೆ ಬಂದಾಗ ನಮ್ಮ ತಾಯಿಯನ್ನು ಅಮ್ಮ ಎಂದೇ ಕರೆಯುತ್ತಿದ್ದ. ತುಂಬಾ ಆಪ್ತರಾಗಿದ್ದೆವು. ಒಳ್ಳೆಯ ರೀತಿಯಲ್ಲೇ ಇದ್ದ. ನನ್ನ ಕಡೆಯಿಂದ ಆತನ ಮೇಲೆ ಯಾವುದೇ ದೂರು ಇಲ್ಲ. ಏಕೆಂದರೆ ನನ್ನೊಂದಿಗೆ ಚೆನ್ನಾಗಿಯೇ ಇದ್ದ. ಇದುವರೆಗೂ ನಾನು ಹೇಳಿರುವ ಇಷ್ಟು ವಿಚಾರ ಸತ್ಯ ಎಂದು ನಿತ್ಯಾ ಹೇಳಿದರು.

ಇದರ ನಡುವೆ ಲಾಕ್​ಡೌನ್​ ಆಯಿತು. ನಾವು ಹೈದರಾಬಾದ್​ಗೆ ಸ್ಥಳಾಂತರ ಆದೆವು. ಇದೀಗ ಹೆಚ್ಚು ಹೆಚ್ಚು ಚಿತ್ರಗಳಲ್ಲಿ ನಟಿಸುವ ಆಫರ್​ ಬರುತ್ತಿವೆ. ನಾನು ಸಿನಿಮಾದಲ್ಲಿ ಬಿಜಿಯಾದೆ. ಅಲ್ಲಿಂದಾಚೆಗೆ ಭಾರ್ಗವ ಸಂಪರ್ಕ ಕಡಿತಗೊಂಡಿತು. ದೇವರ ದಯೆಯಿಂದ ನನಗೆ ತುಂಬಾ ಉತ್ತಮ ಅವಕಾಶಗಳು ಹುಡುಕಿ ಬರುತ್ತಿವೆ. ಒಂದು ತಿಂಗಳಲ್ಲಿ 15 ದಿನ ನಾನು ಬಿಜಿಯಾಗಿರುತ್ತೇನೆ ಎಂದು ಸಿನಿಮಾ ಕೆರಿಯರ್​ ಬಗ್ಗೆ ತಿಳಿಸಿದರು.

ನಾನು ಸಂತೋಷವಾಗಿಯೇ ಇದ್ದೇನೆ. ಆದರೆ, ಒಂದು ಹೆಣ್ಣಿನ ಬದುಕು ಹೀಗಾಯಿತ್ತಲ್ಲ ಎಂದು ನೋವು ಇದೆ. ಆದರೆ, ಇದನ್ನು ನನಗೆ ನಂಬಲು ಆಗುತ್ತಿಲ್ಲ. ಇದರ ನಡುವೆ ನನ್ನ ವಿರುದ್ಧ ಸಾಕಷ್ಟು ಮೀಮ್ಸ್​ಗಳು ಮತ್ತು ಟ್ರೋಲ್​ಗಳಾಗುತ್ತಿವೆ. ಇದರ ನೋವು ನನಗೆ ಕಾಡುತ್ತಿದೆ. ನನ್ನ ಪಾಲಕರ ಬಗ್ಗೆ ಏನು ತಿಳಿದುಕೊಳ್ಳುತ್ತಾರೋ ಎಂಬ ಭಯವಿದೆ. ನನಗೆ ಒಳ್ಳೆಯ ಹೆಸರು ಬರದಿದ್ದರೂ ಪರವಾಗಿಲ್ಲ. ಆದರೆ, ಕೆಟ್ಟ ಹೆಸರು ಬರಬಾರದು ಎಂಬುದೇ ನನ್ನ ಪಾಲಕರ ಆಸೆ. ಹೀಗಾಗಿ ಈ ವಿಚಾರದಲ್ಲಿ ನನಗೂ ನೋವಿದೆ ಎಂದು ನಿತ್ಯಾ ಭಾವುಕರಾದರು. ಇದರೊಂದಿಗೆ ನನ್ನ ವಿರುದ್ಧ ಮಾಡಿರುವ ವಿಡಿಯೋ ಡಿಲೀಟ್​ ಮಾಡುವಂತೆ ಕೇಳಿಕೊಂಡರು ಮತ್ತು ತನಗೆ ಬೆಂಬಲ ಸೂಚಿಸಿದವರಿಗೆ ಧನ್ಯವಾದ ಹೇಳಿದರು. (ಏಜೆನ್ಸೀಸ್​)