ನ್ಯೂಸ್

ಮದುವೆ ಮುಗಿಸಿಕೊಂಡು ಮನೆಗೆ ಬರ್ತಿದ್ದ ನವದಂಪತಿ ಸೇರಿ ಏಳು ಮಂದಿ ದುರಂತ ಸಾವು

ಹೈದರಾಬಾದ್​: ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹದ ನೀರಿನಲ್ಲಿ ನವವಿವಾಹಿತೆ ಸೇರಿದಂತೆ ಸುಮಾರು 7 ಮಂದಿ ಕೊಚ್ಚಿ ಹೋಗಿದ್ದಾರೆ.

ಮದುವೆ ನಂತರದ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ನವದಂಪತಿ ಪ್ರವಲಿಕಾ ಮತ್ತು ನವಾಜ್​ ರೆಡ್ಡಿ ಇತರೆ ನಾಲ್ಕು ಮಂದಿಯೊಂದಿಗೆ ಕಾರಿನಲ್ಲಿ ವಿಕಾರಾಬಾದ್​ನಲ್ಲಿ ಪ್ರಯಾಣಿಸುವಾಗ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ನವವಿವಾಹಿತೆಯ ನಾದಿನಿ ಶ್ವೇತಾ ಮತ್ತು ಆಕೆಯ ಮಗ ತ್ರೀನಾಥ್​ ರೆಡ್ಡಿ (8) ನೀರಿನಲ್ಲಿ ಕೊಚ್ಚಿ ಹೋಗಿದ್ದು, ಇನ್ನೊಬ್ಬ ಹುಡುಗನ ಗುರುತು ಪತ್ತೆಯಾಗಿಲ್ಲ.

ಭಾರೀ ಮಳೆಯ ಬಳಿಕ ಭಾನುವಾರ ರಾತ್ರಿ ವಾರಂಗಲ್​ನ ಚರಂಡಿಯೊಂದರಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ದೇಹ ಪತ್ತೆಯಾಗಿತ್ತು. ಮೃತನನ್ನು ಶಿವನಗರ ಮೂಲದ ವೊರ್ರೊಮ್​ ಕ್ರಾಂತಿ ಕುಮಾರ್​ ಎಂದು ಗುರುತಿಸಲಾಗಿದೆ. ಆತನ ಲ್ಯಾಪ್​ಟಾಪ್​ ಸಹ ಸ್ಥಳದಲ್ಲಿ ಪತ್ತೆಯಾಗಿದೆ.

ಮತ್ತೊಂದು ಘಟನೆಯಲ್ಲಿ 70 ವರ್ಷದ ಹಿರಿಯ ವ್ಯಕ್ತಿಯ ಕಾರು ಶಂಕರಪಲ್ಲಿಯಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿದೆ. 30 ವರ್ಷದ ಕೂಲಿ ಕಾರ್ಮಿಕನು ಕೂಡ ಆದಿಲ್​ಬಾದ್​ನಲ್ಲಿ ಮಳೆ ಪ್ರವಾಹದಿಂದ ಮೃತಪಟ್ಟಿದ್ದಾನೆ. ಸ್ಕೂಟರ್​ ಚಲಾಯಿಸುತ್ತಿದ್ದ ಇಬ್ಬರು ಯುವತಿಯರು ಕೂಡ ಯಾದಾದ್ರಿ ಭೋಂಗಿರ್​ ಜಿಲ್ಲೆಯಲ್ಲಿ ನೀರಿನ ಸೆಳೆತಕ್ಕೆ ಕಣ್ಮರೆಯಾಗಿದ್ದಾರೆ.

ನೈರುತ್ಯ ಮುಂಗಾರು ಚುರುಕಾಗಿರುವುದರಿಂದ ವಿಕಾರಾಬಾದ್, ರಂಗಾರೆಡ್ಡಿ ಮತ್ತು ಸಿದ್ದಿಪೇಟೆಯಲ್ಲಿ ಭಾರೀ ಮಳೆಯಾಗಿದೆ. ಹೈದರಾಬಾದ್, ಆದಿಲಾಬಾದ್, ನಿಜಾಮಾಬಾದ್, ಕರೀಂನಗರ, ವಾರಂಗಲ್ ಮತ್ತು ಖಮ್ಮಂನಲ್ಲಿ ಗುಡುಗು ಸಹಿತ ಭಾರೀ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. (ಏಜೆನ್ಸೀಸ್​)