ವಿಜಯವಾಡ: ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಇದು ಕೂಡ ಸಾಮಾಜಿಕ ಪಿಡುಗುಗಳಲ್ಲಿ ಒಂದೆನ್ನಬಹುದು. ಇದಕ್ಕೆ ತಾಜಾ ಉದಾಹರಣೆಯಾಗಿ ಆಂಧ್ರ ಪ್ರದೇಶದ ಬ್ಯಾಂಕ್ ಮ್ಯಾನೇಜರ್ ಒಬ್ಬ ಕಚೇರಿಯ ಮಹಿಳಾ ಸಹೋದ್ಯೋಗಿಗಳಿಗೆ ಮಾತ್ರವಲ್ಲದೆ, ಮಹಿಳಾ ಗ್ರಾಹಕರ ಮೇಲೂ ತನ್ನ ಕಾಮದೃಷ್ಟಿ ಬೀರಿರುವ ಘಟನೆ ವರದಿಯಾಗಿದೆ.
ಮಹಿಳಾ ಗ್ರಾಹಕರಿಗೆ ಲೋನ್ ಬೇಕಾದರೆ ಅದಕ್ಕೆ ಪ್ರತಿಯಾಗಿ ಬ್ಯಾಂಕ್ ಮ್ಯಾನೇಜರ್ಗೆ ಲೈಂಗಿಕ ಸುಖ ನೀಡಬೇಕಂತೆ. ಈ ರೀತಿ ಕಿರುಕುಳ ಪ್ರಕರಣ ಆಂಧ್ರದ ನೆಲ್ಲೂರು ಜಿಲ್ಲೆಯ ಪೊದಲಕುರ್ ಶಾಖೆಯಲ್ಲಿ ಬೆಳಕಿಗೆ ಬಂದಿದೆ.
ವಿವರಣೆಗೆ ಬರುವುದಾದರೆ, ಆರೋಪಿ ನಾಗೇಶ್ ಪೊದಲಕುರ್ ಎಸ್ಬಿಐ ಶಾಖೆಯಲ್ಲಿ ಎಸ್ಬಿಐ ಮ್ಯಾನೇಜರ್ ಆಗಿದ್ದಾರೆ. ಈತನ ವಿರುದ್ಧ ಮಹಿಳಾ ಸಹೋದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪವಿದೆ. ಅಲ್ಲದೆ, ಈತನ ಕಿರುಕುಳ ತಾಳದೇ ಕೆಲವು ಉದ್ಯೋಗಿಗಳು ಸ್ವಯಂ ವರ್ಗಾವಣೆ ತೆಗೆದುಕೊಂಡಿದ್ದಾರಂತೆ.
ಸಿಸಿಟಿವಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಚೆಲ್ಲಾಟ ದಾಖಲಾದ ಬಳಿಕ ಆತನ ದುಷ್ಕೃತ್ಯಗಳೆಲ್ಲ ಒಂದೊಂದಾಗಿ ಬಯಲಿಗೆ ಬಂದಿದೆ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಮ್ಯಾನೇಜರ್ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸುತ್ತಿರುವುದು ದಾಖಲಾಗಿದೆ.
ಸದ್ಯ ನಾಗೇಶ್ ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಗೇಶ್ ಪತ್ತೆಗೆ ಬಲೆ ಬೀಸಿದ್ದಾರೆ. (ಏಜೆನ್ಸೀಸ್)