ನ್ಯೂಸ್

VIDEO| ಮೃಗಾಲಯದ ಸಿಂಹದ ಗುಹೆಗೆ ನುಗ್ಗಲು ಯತ್ನಿಸಿದ ಯುವಕ: ಆತ ಕೊಟ್ಟ ಕಾರಣ ಕೇಳಿದ್ರೆ ದಂಗಾಗ್ತೀರಾ!

ಹೈದರಾಬಾದ್​: ಯುವಕನೊಬ್ಬ ಸಿಂಹದ ಗುಹೆಗೆ ನುಗ್ಗಲು ಯತ್ನಿಸಿದ ಘಟನೆ ಹೈದರಾಬಾದ್​ನ ಬಹುದುರ್ಪುರಾದಲ್ಲಿರುವ ನೆಹರೂ ಝೂಲಾಜಿಕಲ್ ಪಾರ್ಕಿನಲ್ಲಿ ನಡೆದಿದೆ.

ಯುವಕನನ್ನು ನೋಡಿದ ಪ್ರವಾಸಿಗರು ಕೂಡಲೇ ಮೃಗಾಲಯ ಸಿಬ್ಬಂದಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಯುವಕನನ್ನು ರಕ್ಷಿಸಿ, ಬಹುದುರ್ಪುರಾ ಪೊಲೀಸ್​ ಠಾಣೆಗೆ ಒಪ್ಪಿಸಿದ್ದಾರೆ. ಇದಿಷ್ಟು ಘಟನೆ ಮಂಗಳವಾರ ಮಧ್ಯಾಹ್ನ 3.30ಕ್ಕೆ ನಡೆದಿದೆ.

ಸಿಬ್ಬಂದಿಯ ಪ್ರಕಾರ 31 ವರ್ಷದ ಸಾಯಿ ಕುಮಾರ್​ ಎಂಬಾತ ಟಿಕೆಟ್​ ಪಡೆದು ಮೃಗಾಲಯಕ್ಕೆ ಪ್ರವೇಶ ಪಡೆದಿದ್ದಾನೆ. ಬಳಿಕ ಸಿಂಹಗಳ ವಾಸಿಸುವ ವಲಯಕ್ಕೆ ತೆರಳಿದ ಸಾಯಿ ಕುಮಾರ್​ ಬಂಡೆಯನ್ನು ಹತ್ತಿ ಸಿಂಹದ ಗುಹೆ ಒಳಗೆ ಹೋಗಲು ಯತ್ನಿಸಿದ್ದಾನೆ. ಬಂಡೆ ಮೇಲೆ ನಿಂತಿದ್ದ ಆತನನ್ನು ನೋಡಿ ಸಿಂಹಗಳು ಕೂಡ ದಾಳಿಗೆ ಮುಂದಾಗಿದ್ದವು. ಆದರೆ, ಆತನ ಅದೃಷ್ಟ ಚೆನ್ನಾಗಿತ್ತು. ಆತನನ್ನು ನೋಡಿದ ಸಹ ಪ್ರವಾಸಿಗರು ಕೂಡಲೇ ಮೃಗಾಲಯದ ಸಿಬ್ಬಂದಿಗೆ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಸಿಬ್ಬಂದಿ ಆತನ್ನು ರಕ್ಷಣೆ ಮಾಡಿದರು.

ಈ ಬಗ್ಗೆ ಮಾತನಾಡಿರುವ ಬಹುದುರ್ಪುರಾ ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್​ ದುರ್ಗಾ ಪ್ರಸಾದ್​, ಸಾಯಿ ಕುಮಾರ್​ ಕಳೆದ ಕೆಲವು ವರ್ಷಗಳಿಂದ ತಿರುಮಲಗಿರಿ ಏರಿಯಾದಲ್ಲಿ ವಾಸವಿದ್ದಾರೆ. ಆತನ ಪ್ರಶ್ನಿಸಿದ್ದಕ್ಕೆ ಸಿಂಹಗಳ ಬಳಿ ವಜ್ರ ಮತ್ತು ಚಿನ್ನವಿದೆ. ಅದಕ್ಕಾಗಿ ನಾನು ಅದರ ಬಳಿ ಹೋಗಲು ಯತ್ನಿಸಿದೆ ಎಂದನು. ಆತನ ಮಾನಸಿಕ ಸ್ಥಿತಿ ಸರಿಯಿರಲಿಲ್ಲ. ಸದ್ಯ ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.