ಹೈದರಾಬಾದ್: ನನ್ನ ಪತ್ನಿ ನಾಪತ್ತೆಯಾಗಿದ್ದಾಳೆ ಸರ್... ನನ್ನ ಪತಿಯೂ ಕಾಣಿಸುತ್ತಿಲ್ಲ ಹುಡುಕಿಕೊಡಿ ಸರ್... ಎಂದು ಏಕಕಾಲದಲ್ಲಿ ಪುರುಷ ಮತ್ತು ಮಹಿಳೆಯೊಬ್ಬಳು ದೂರು ನೀಡಿರುವ ಘಟನೆ ಹೈದರಾಬಾದ್ನ ಜುಬಿಲಿ ಹಿಲ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರೇ ಬೆರಗಾಗುವಂತಹ ಪ್ರಸಂಗ ಜರುಗಿದೆ.
ಘಟನೆಯ ವಿವರಣೆಗೆ ಬರುವುದಾದರೆ, ಬಿ. ನಾರಾಯಣದಾಸ್ ಮತ್ತು ಮೋನಿಕಾ ದಾಸ್ ಪಶ್ಚಿಮ ಬಂಗಾಳದ ಕೊಲ್ಕತ ಮೂಲದ ದಂಪತಿ. ಜೀವನ ನಿರ್ವಹಣೆಗಾಗಿ ಹೈದರಾಬಾದ್ಗೆ ಬಂದು ವೆಂಕಟಗಿರಿ ಹತ್ತಿರದ ಯೂಸುಫ್ಗುಡದಲ್ಲಿ ನೆಲೆಸಿದ್ದರು. ನಾರಾಯಣದಾಸ್ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದ.
ಹೀಗಿರುವಾಗಿ ಪತ್ನಿ ಮೋನಿಕಾ, ಎಂಡಿ ಆಸಿಫ್ ಎಂಬಾತನ ಜತೆಯಲ್ಲಿ ಕಳೆದು ಒಂದು ವರ್ಷದಿಂದ ನಿರಂತರವಾಗಿ ಫೋನ್ನಲ್ಲಿ ಮಾತನಾಡುವುದನ್ನು ಗಮನಿಸಿ ಎಚ್ಚರಿಕೆ ನೀಡಿದ್ದ. ಪತಿ-ಪತ್ನಿಯರ ನಡುವೆ ಜಗಳವೂ ನಡೆದು, ಹಿರಿಯರ ಸಮ್ಮುಖದಲ್ಲಿ ಸಂಧಾನವು ಆಗಿತ್ತು.
ಇದೇ ಸಂದರ್ಭದಲ್ಲಿ ಮೋನಿಕಾ ತನ್ನಿಬ್ಬರು ಮಕ್ಕಳೊಂದಿಗೆ ಇದೇ ತಿಂಗಳ 24ರಂದು ಗಂಡನಿಗೂ ಹೇಳದೆ ಕೋಲ್ಕತಗೆ ತೆರಳುತ್ತಾಳೆ. ಇತ್ತ ಪತ್ನಿ ಕಾಣೆಯಾಗಿರುವುದನ್ನು ನೋಡಿ ನಾರಾಯಣದಾಸ್ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಭಾನುವಾರು ದೂರು ದಾಖಲಿಸುತ್ತಾನೆ. ವೆಂಕಟಗಿರಿ ನಿವಾಸಿ ಆಶಿಪ್, ಪತ್ನಿ ಜತ ಹೋಗಿರುವುದು ತಿಳಿದೇ ನಾರಾಯಣದಾಸ್ ದೂರು ನೀಡಿರುತ್ತಾನೆ.
ಇದೇ ಸಮಯದಲ್ಲಿ ಜುಬಿಲಿ ಹಿಲ್ಸ್ ಠಾಣೆಗೆ ಬರುವ ಆಸಿಫ್ ಪತ್ನಿ, ನನ್ನ ಗಂಡ ಕಾಣಿಸುತ್ತಿಲ್ಲ ಎಂದು ದೂರು ನೀಡುತ್ತಾಳೆ. ಎರಡು ಪ್ರಕರಣಗಳನ್ನು ನೋಡುವ ಪೊಲೀಸರಿಗೆ ಒಂದು ಕ್ಷಣ ಅಚ್ಚರಿಯಾಗುತ್ತದೆ. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. (ಏಜೆನ್ಸೀಸ್)