ನ್ಯೂಸ್

ಹೀರಾಬೆನ್​ಗೆ 100ರ ಸಂಭ್ರಮ: ಶತಾಯುಷಿ ತಾಯಿಯ ಬಗ್ಗೆ ಭಾವನಾತ್ಮಕ ಪತ್ರ ಬರೆದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್​ ಇಂದಿಗೆ (ಜೂನ್​ 18) 100ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಶತಾಯುಷಿ ತಾಯಿಯ ಹುಟ್ಟುಹಬ್ಬದ ದಿನ ಪ್ರಧಾನಿ ಮೋದಿ ಭಾವನಾತ್ಮಕ ಬರವಣಿಗೆಯೊಂದಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದು, ತಾಯಿಯೊಂದಿಗೆ ತನ್ನ ಜೀವನವನ್ನು ನೆನಪಿಸಿಕೊಂಡಿದ್ದಾರೆ.

ಅಮ್ಮ ಎಂಬುದು ಕೇವಲ ಒಂದು ಪದವಲ್ಲ ಅದು ಭಾವನೆಗಳ ಪಂಕ್ತಿಯನ್ನು ಸೆರೆಹಿಡಿಯುತ್ತದೆ. ಇಂದಿಗೆ ನನ್ನ ತಾಯಿ ಹೀರಾಬೆನ್​ 100ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ವಿಶೇಷ ದಿನದಂದು ಸಂತೋಷ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ನನ್ನ ಕೆಲವು ಆಲೋಚನೆಗಳನ್ನು ಅಕ್ಷರ ರೂಪಕ್ಕೆ ಇಳಿಸಿದ್ದೇನೆ ಎಂದು ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದಾರೆ.

ತಮ್ಮ ಬ್ಲಾಗ್​ನಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಪ್ರಧಾನಿ ಮೋದಿ, ತಮ್ಮ ತಾಯಿ ಹೀರಾಬೆನ್​ ಅವರನ್ನು ಸರಳ ಮತ್ತು ಅಸಾಧಾರಣ ಮಹಿಳೆ ಎಂದು ಬಣ್ಣಿಸಿದ್ದಾರೆ. ನಮ್ಮ ತಾಯಿ ಚಿಕ್ಕವಳಿದ್ದಾಗ ತನ್ನ ತಾಯಿಯನ್ನು ಕಳೆದುಕೊಂಡು ತುಂಬಾ ಕಷ್ಟಪಟ್ಟಿದ್ದಾರೆ. ಜೀವನದಲ್ಲಿ ಎದುರಾದ ಅನೇಕ ಕಷ್ಟಗಳನ್ನು ಸಹಿಸಿಕೊಂಡರು. ಇದರಿಂದಲೇ ಅವರಿಂದು ಹೆಚ್ಚು ಚೇತರಿಸಿಕೊಂಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ತಾಯಿಯ ಜತೆಗಿನ ಕೆಲವು ವಿಶೇಷ ಕ್ಷಣಗಳನ್ನು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಮೆಲಕು ಹಾಕಿದ್ದಾರೆ. ಮೋದಿ ಅವರು ಬೆಳೆದಂತೆ ಅವರ ತಾಯಿ ಮಾಡಿದ ಹಲವಾರು ತ್ಯಾಗಗಳನ್ನು ನೆನಪಿಸಿಕೊಂಡಿದ್ದಾರೆ. ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸವನ್ನು ರೂಪಿಸಿದ ವಿವಿಧ ಗುಣಗಳನ್ನು ಮೋದಿ ಪ್ರಸ್ತಾಪಿಸಿದ್ದಾರೆ.

ವಡ್​ನಗರದಲ್ಲಿರುವ ಮಣ್ಣಿನ ಗೋಡೆಗಳು ಮತ್ತು ಛಾವಣಿಗೆ ಮಣ್ಣಿನ ಹೆಂಚುಗಳನ್ನು ಹೊಂದಿದ್ದ ಪುಟ್ಟ ಮನೆಯನ್ನು ನೆನಪಿಸಿಕೊಂಡಿದ್ದಾರೆ. ಈ ಮನೆಯಲ್ಲಿ ಮೋದಿ ಅವರು ತಮ್ಮ ಪಾಲಕರು ಮತ್ತು ಒಡಹುಟ್ಟಿದವರೊಂದಿಗೆ ಉಳಿದುಕೊಂಡಿದ್ದರು. ಮನೆಯ ಎಲ್ಲಾ ಕೆಲಸಗಳನ್ನು ತಾನೊಬ್ಬಳೇ ಮಾಡುವುದಲ್ಲದೇ ಮನೆಯ ಅಲ್ಪ ಆದಾಯಕ್ಕೆ ಪೂರಕವಾದ ಕೆಲಸವನ್ನು ನಮ್ಮ ತಾಯಿ ಮಾಡುತ್ತಿದ್ದರು. ಕೆಲವು ಮನೆಗಳಲ್ಲಿ ಪಾತ್ರೆಗಳನ್ನು ತೊಳೆಯುವ ಕೆಲಸ ಮಾಡುತ್ತಿದ್ದರು ಮತ್ತು ಉಳಿದ ಸಮಯದಲ್ಲಿ ಚರಕವನ್ನು ತಿರುಗಿಸುತ್ತಿದ್ದರು. ಈ ಮೂಲಕ ಅಲ್ಪ ಪ್ರಮಾಣದ ಆದಾಯವನ್ನು ಸಂಪಾದನೆ ಮಾಡುತ್ತಿದ್ದರು ಎಂದಿದ್ದಾರೆ.

ಮಳೆಗಾಲದ ಸಂದರ್ಭದಲ್ಲಿ ನಮ್ಮ ಮನೆಯ ಮೇಲ್ಛಾವಣಿ ಸೋರುತ್ತಿತ್ತು ಮತ್ತು ಮನೆ ಒಳಗೆ ನೀರು ಬರುತ್ತಿತ್ತು. ಮಳೆನೀರನ್ನು ಸಂಗ್ರಹಿಸಲು ತಾಯಿ ಬಕೆಟ್ ಮತ್ತು ಪಾತ್ರೆಗಳನ್ನು ಮಳೆ ನೀರು ಸೋರಿಕೆಯ ಕೆಳಗೆ ಇಡುತ್ತಿದ್ದರು. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ತಾಯಿ ಸ್ಥೈರ್ಯದ ಪ್ರತೀಕವಾಗಿದ್ದರು ಎಂದು ಪ್ರಧಾನಿ ಮೋದಿ ನೆನಪಿಸಿಕೊಂಡಿದ್ದಾರೆ.

ಔಪಚಾರಿಕವಾಗಿ ಶಿಕ್ಷಣ ಪಡೆಯದೇ ಕಲಿಯಲು ಸಾಧ್ಯ ಎಂಬುದನ್ನು ತಾಯಿಯು ನನಗೆ ಅರಿವು ಮೂಡಿಸಿದರು. ಅವರ ಆಲೋಚನಾ ಪ್ರಕ್ರಿಯೆ ಮತ್ತು ದೂರದೃಷ್ಟಿಯ ಚಿಂತನೆಯು ಯಾವಾಗಲೂ ನನ್ನನ್ನು ಆಶ್ಚರ್ಯಗೊಳಿಸುತ್ತದೆ. ಇಂದಿಗೂ ನನ್ನ ತಾಯಿಯ ಹೆಸರಲ್ಲಿ ಯಾವುದೇ ಆಸ್ತಿ ಇಲ್ಲ. ಅವರು ಚಿನ್ನಾಭರಣ ಹಾಕಿರುವುದನ್ನು ನಾನೆಂದಿಗೂ ನೋಡೇ ಇಲ್ಲ. ಅವರಿಗೆ ಅದರ ಮೇಲೆ ಆಸಕ್ತಿಯೂ ಇಲ್ಲ. ಮೊದಲಿನಂತೆಯೇ ಇಂದಿಗೂ ತಮ್ಮ ಸಣ್ಣ ಕೋಣೆಯಲ್ಲಿ ಅತ್ಯಂತ ಸರಳವಾದ ಜೀವನಶೈಲಿಯನ್ನು ಮುಂದುವರಿಸುತ್ತಿದ್ದಾರೆ ಎಂದು ಪ್ರಧಾನಿ ತಾಯಿಯ ಸರಳತೆಯನ್ನು ನೆನಪು ಮಾಡಿಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರು ತಾಯಿಯ ಜತೆ ಸಾರ್ವಜನಿಕ ಪ್ರದೇಶಕ್ಕೆ ಹೋದಂತಹ ಎರಡು ಘಟನೆಗಳನ್ನು ತಮ್ಮ ಬ್ಲಾಗ್​ನಲ್ಲಿ ಹೈಲೈಟ್ ಮಾಡಿದ್ದಾರೆ. ಒಮ್ಮೆ ಏಕತಾ ಯಾತ್ರೆಯನ್ನು ಮುಗಿಸಿ, ಶ್ರೀನಗರದ ಲಾಲ್ ಚೌಕ್‌ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ಹಿಂದಿರುಗಿದಾಗ ಅಹಮದಾಬಾದ್‌ನಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ನನ್ನ ತಾಯಿ ನನ್ನ ಹಣೆಗೆ ತಿಲಕವನ್ನು ಹಚ್ಚಿದರು. ಎರಡನೆಯ ಘಟನೆಯಲ್ಲಿ 2001 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ ತಾಯಿ ಸಾರ್ವಜನಿಕವಾಗಿ ನನ್ನ ಜೊತೆ ಕಾಣಿಸಿಕೊಂಡರು ಎಂದು ಹೇಳಿದ್ದಾರೆ.

ಇಂದು ಮುಂಜಾನೆ ಪ್ರಧಾನಿ ಮೋದಿ ಅವರು ತಮ್ಮ ತಾಯಿಯನ್ನು ಗಾಂಧಿನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದರು. ತಾಯಿಯ 100 ನೇ ಹುಟ್ಟುಹಬ್ಬವನ್ನು ಅವರೊಂದಿಗೆ ಆಚರಿಸಿಕೊಂಡರು ಮತ್ತು ಈ ವಿಶೇಷ ಸಂದರ್ಭದಲ್ಲಿ ಅವರ ಆಶೀರ್ವಾದವನ್ನು ಸಹ ಕೋರಿದರು. (ಏಜೆನ್ಸೀಸ್​)