ನ್ಯೂಸ್

ಕಾಶ್ಮೀರದಲ್ಲಿ ಉಗ್ರರಿಂದ ಹಿಂದುಗಳ ಟಾರ್ಗೆಟ್: ಬ್ಯಾಂಕ್​ ಮ್ಯಾನೇಜರ್​ ಬೆನ್ನಲ್ಲೇ ವಲಸೆ ಕಾರ್ಮಿಕ ಗುಂಡೇಟಿಗೆ ಬಲಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದುಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸುತ್ತಿರುವ ಗುಂಡಿನ ದಾಳಿ ಮುಂದುವರಿದಿದ್ದು, ನಿನ್ನೆ (ಜೂ.2) ಕುಲ್ಗಾಮ್​ ಜಿಲ್ಲೆಯಲ್ಲಿ ಬ್ಯಾಂಕ್​ ಮ್ಯಾನೇಜರ್​ನನ್ನು ಹತ್ಯೆ ಮಾಡಿದ್ದ ಭಯೋತ್ಪಾದಕರು ಕೆಲವೇ ಕ್ಷಣಗಳಲ್ಲಿ ವಲಸೆ ಕಾರ್ಮಿಕನನ್ನು ಕೊಲೆ ಮಾಡಿದ್ದಾರೆ.

ನಿನ್ನೆ ಭಯೋತ್ಪಾದಕರು ಸ್ಥಳೀಯರಲ್ಲದ ಕಾರ್ಮಿಕರಿಬ್ಬರ ಮೇಲೆ ಕೇಂದ್ರ ಕಾಶ್ಮೀರ ಜಿಲ್ಲೆಯ ಚಢೂರಾ ಏರಿಯಾದ ಮಗ್ರೇಪೋರಾದಲ್ಲಿರುವ ಬ್ರಿಕ್​ಕಿಲ್ನ್​ ಸ್ಥಳದಲ್ಲಿ ಗುಂಡಿನ ದಾಳಿ ನಡೆಸಿದರು. ಕುಲ್ಗಾಮ್​ ಜಿಲ್ಲೆಯ ಮೊಹನ್​ ಪೊರಾ ಏರಿಯದಲ್ಲಿರುವ ಎಲ್ಲಕ್ವೈ ದೇಹತಿ ಬ್ಯಾಂಕ್​ನಲ್ಲಿ ಮ್ಯಾನೇಜರ್​ ಆಗಿ ಸೇವೆ ಸಲ್ಲಿಸುತ್ತಿದ್ದ ರಾಜಸ್ಥಾನ ಮೂಲದ ವಿಜಯ್​ ಕುಮಾರ್ ಎಂಬುವರ ಮೇಲೆ ದಾಳಿ ನಡೆದ ಕೆಲವೇ ಕ್ಷಣಗಳಲ್ಲಿ ಕಾರ್ಮಿಕರ ಮೇಲೆಯೂ ದಾಳಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುಂಡಿನ ದಾಳಿಗೆ ಮೃತಪಟ್ಟ ಕಾರ್ಮಿಕನನ್ನು ಬಿಹಾರ ಮೂಲದ ದಿಲ್ಕುಶ್​ ಕುಮಾರ್​ ಎಂದು ಗುರುತಿಸಲಾಗಿದೆ. ರಾತ್ರಿ 9.10ಕ್ಕೆ ಘಟನೆ ನಡೆದ್ದು, ಭಯೋತ್ಪಾದಕರಿಗಾಗಿ ಪೊಲೀಸರು ಆ ಪ್ರದೇಶವನ್ನು ಸುತ್ತುವರಿದಿದ್ದಾರೆ.

ಹಿಂದುಗಳನ್ನೇ ಉಗ್ರರು ಟಾರ್ಗೆಟ್​ ಮಾಡಿದ್ದು, ಸದ್ಯ ಆತಂಕದ ವಾತಾವರಣದಲ್ಲಿ ಬದುಕುವಂತಾಗಿದೆ. 29 ವರ್ಷದ ಬ್ಯಾಂಕ್​ ಮ್ಯಾನೇಜರ್​ ವಿಜಯ್​ ಕುಮಾರ್​ ರಾಜಸ್ಥಾನದ ಹನುಮಗಢ ಮೂಲದವರು. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಕುಲ್ಗಾಮ್​ ಜಿಲ್ಲೆಯ ಗೋಪಾಲ್ಪೋರಾ ಪ್ರದೇಶದಲ್ಲಿ ಹಿಂದು ಮಹಿಳೆ ಹತ್ಯೆಯಾದ ಎರಡೇ ದಿನದಲ್ಲಿ ಬ್ಯಾಂಕ್​ ಮ್ಯಾನೇಜರ್​ ಹತ್ಯೆಯಾಗಿದೆ. ಉಗ್ರರ ಗುಂಡೇಟಿಗೆ ಹತ್ಯೆಯಾದ ಮಹಿಳೆಯನ್ನು ರಜನಿ ಬಾಲಾ ಎಂದು ಗುರುತಿಸಲಾಗಿದೆ. ಈಕೆ ಶಾಲಾ ಶಿಕ್ಷಕಿಯಾಗಿದ್ದರು. ಗಂಡ ಮತ್ತು ಮಗಳ ಜತೆ ಜಮ್ಮು ವಿಭಾಗದ ಸಾಂಬಾದಲ್ಲಿ ವಾಸಿಸುತ್ತಿದ್ದರು. ಕಳೆದ ವಾರ ಟಿವಿ ಕಲಾವಿದೆ ಅಮ್ರೀನ್​ ಭಟ್​ ಅವರನ್ನು ಲಷ್ಕರ್​ ಇ ತೊಯ್ಬಾ ಸಂಘಟನೆಯ ಉಗ್ರರು ಬದ್ಗಾಮ್​ ಜಿಲ್ಲೆಯ ಛಡೂರಾ ಏರಿಯಾದಲ್ಲಿ ಗುಂಡಿಟ್ಟು ಹತ್ಯೆಗೈದಿದ್ದರು. ಮೇ 12ರಂದು ಕಂದಾಯ ಇಲಾಖೆ ಉದ್ಯೋಗಿ ರಾಹುಲ್​ ಭಟ್​ ಎಂಬುವರನ್ನು ಬದ್ಗಾಮ್​ ಜಿಲ್ಲೆಯಲ್ಲೇ ಉಗ್ರರು ಹತ್ಯೆ ಮಾಡಿದ್ದರು.

ಕಾಶ್ಮೀರದಲ್ಲಿ 2020ರ ಡಿಸೆಂಬರ್​ನಿಂದೀಚೆಗೆ ಟಾರ್ಗೆಟ್ ಹತ್ಯೆ ಪ್ರಕರಣ ಹೆಚ್ಚಾಗಿದೆ. ಉಗ್ರರು ಇದುವರೆಗೆ ಅಲ್ಪಸಂಖ್ಯಾತ ಸಮುದಾಯದ 18 ಸದಸ್ಯರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಿದ್ದಾರೆ. ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ವಿವಿಧ ರಾಜಕೀಯ ಪಕ್ಷಗಳು ಬಿಜೆಪಿಯ ಮೇಲೆ ವಾಗ್ದಾಳಿ ನಡೆಸಿವೆ. ಇದಲ್ಲದೆ, ಉದ್ದೇಶಿತ ಹತ್ಯೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತದಿಂದ ಪ್ರತಿಪಕ್ಷಗಳು ಉತ್ತರವನ್ನು ಕೇಳಿವೆ. (ಏಜೆನ್ಸೀಸ್​)