ಮೆಕ್ಸಿಕೋ: ಇಲ್ಲಿನ ಪೆಸಿಫಿಕ್ ಕರಾವಳಿಯಲ್ಲಿ ಸೋಮವಾರ ಸಂಭವಿಸಿದ ಬೃಹತ್ ಭೂಕಂಪನದಿಂದಾಗಿ ನಗರದ ಕಟ್ಟಡಗಳು, ರಸ್ತೆಗಳು ಹಾಗೂ ಕಾರುಗಳು ಅಲುಗಾಡಿದ್ದು, ಜನರಲ್ಲಿ ಕೆಲಕಾಲ ಆತಂಕದ ವಾತಾವರಣ ಉಂಟಾಯಿತು. ಭೂಕಂಪನಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಟ್ಟಡದ ಮೇಲಿರುವ ಈಜುಕೊಳವೊಂದರಲ್ಲಿ ಮಿನಿ ಸುನಾಮಿ ಉಂಟಾಗಿರುವ ದೃಶ್ಯ ಎದೆ ಝಲ್ ಎನಿಸುವಂತಿದೆ.
ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 1.05ರ ಸುಮಾರಿಗೆ 7.5 ತೀವ್ರತೆಯ ಪ್ರಬಲ ಭೂಕಂಪನವು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಭೂಕಂಪವು ಅಕ್ವಿಲಾದಿಂದ ಆಗ್ನೇಯಕ್ಕೆ 37 ಕಿಲೋಮೀಟರ್ ದೂರದಲ್ಲಿ ಕೊಲಿಮಾ ಮತ್ತು ಮೈಕೋವಾಕನ್ ರಾಜ್ಯಗಳ ಬಳಿ ಕೇಂದ್ರೀಕೃತವಾಗಿತ್ತು ಎಂದು ತಿಳಿದುಬಂದಿದೆ.
ಟ್ವಿಟರ್ನಲ್ಲಿ ಹರಿದಾಡುತ್ತಿರುವ ಸಾಕಷ್ಟು ವಿಡಿಯೋಗಳು ಭೂಕಂಪದ ತೀವ್ರತೆಗೆ ಸಾಕ್ಷಿಯಾಗಿವೆ. ಕಟ್ಟಡವೊಂದರ ಮೇಲಿರುವ ಈಜುಕೊಳದ ದೃಶ್ಯವನ್ನು ನೆಟ್ಟಿಗರೊಬ್ಬ ಹಂಚಿಕೊಂಡಿದ್ದು, ಸ್ವಮ್ಮಿಂಗ್ಪೂಲ್ನಲ್ಲಿ ಮಿನಿ ಸುನಾಮಿ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಭೂಕಂಪನಕ್ಕೆ ಕಟ್ಟಡ ಅಲುಗಾಡಿದ ಪರಿಣಾಮ ಕಟ್ಟಡದ ಮೇಲಿಂದ ನೀರು ಕೆಳಗೆ ಚೆಲ್ಲುತ್ತಿರುವ ದೃಶ್ಯವಿದೆ. ಇನ್ನೊಂದು ವಿಡಿಯೋದಲ್ಲಿ ಹೋಟೆಲ್ ಒಂದರ ಕೊಠಡಿಯೊಳಗೆ ಫ್ಯಾನ್ ಅಲುಗಾಡುತ್ತಿರುವ ದೃಶ್ಯವಿದೆ. ಮಗದೊಂದು ವಿಡಿಯೋದಲ್ಲಿ ಭೂಂಕಪನಕ್ಕೆ ಪಾರ್ಕ್ ಮಾಡಿರುವ ಕಾರುಗಳು ಸಹ ಅಲುಗಾಡುತ್ತಿವೆ.
ಮೈಕೋವಾಕನ್ನ ಸಾರ್ವಜನಿಕ ಭದ್ರತಾ ಇಲಾಖೆಯ ಪ್ರಕಾರ, ಆ ಕ್ಷಣದಲ್ಲಿ ಆಸ್ತಿ ಮತ್ತು ಪ್ರಾಣ ಹಾನಿಯ ಕುರಿತು ಯಾವುದೇ ವರದಿಗಳಾಗಿಲ್ಲ. ಆದರೆ, ಕೆಲವು ಕಟ್ಟಡಗಳು ಬಿರುಕು ಬಿಟ್ಟಿವೆ ಎಂದು ಹೇಳಿದೆ. ಭೂಕಂಪನ ಪರಿಣಾಮ ತೀವ್ರವಾಗಿದ್ದರೂ, ಪೆಸಿಫಿಕ್ ಕರಾವಳಿಯಲ್ಲಿ ಯಾವುದೇ ಸುನಾಮಿ ಎಚ್ಚರಿಕೆ ಬಂದಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೂ ಸುನಾಮಿ ಅಲೆಗಳ ಸಾಧ್ಯತೆ ಇದೆ ಎಂದು ಯುಎಸ್ ಸುನಾಮಿ ಎಚ್ಚರಿಕೆ ಕೇಂದ್ರ ಎಚ್ಚರಿಸಿದೆ. (ಏಜೆನ್ಸೀಸ್)