ನ್ಯೂಸ್

ನಿಶ್ಚಿತಾರ್ಥಕ್ಕೆ ನಾಲ್ಕು ದಿನಗಳಿರುವಾಗಲೇ ಭಾವಿ ಪತಿಯಿಂದ ಶಾಕ್​: ಸಾವಿನ ಹಾದಿ ಹಿಡಿದ ಯುವತಿ..!

ಮಹೇಶ್ವರಂ: ನಿಶ್ಚಿತಾರ್ಥ ರದ್ದಾಗಿದ್ದಕ್ಕೆ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ಬೆಳಗ್ಗೆ ತೆಲಂಗಾಣದ ಮಹೇಶ್ವರಂ ಮಂಡಲದ ಪೆಂಡ್ಯಾಲಾ ಗ್ರಾಮದಲ್ಲಿ ನಡೆದಿದೆ.

ಮೃತ ಯುವತಿಯನ್ನು ಪ್ರಗತಿ ಎಂದು ಗುರುತಿಸಲಾಗಿದೆ. ಈಕೆ ಡಿಗ್ರಿ ಓದುತ್ತಿದ್ದಳು. ಅಮೀರ್​ಪೇಟೆ ಗ್ರಾಮದ ಕಾರ್ತಿಕ್​ ಎಂಬುವನ ಜತೆಯಲ್ಲಿ ನಿಶ್ಚಿತಾರ್ಥವಾಗಿ, ಮದುವೆ ಆಗಬೇಕಿತ್ತು. ಗುರುವಾರ ನಿಶ್ಚಿತಾರ್ಥ ನೆರವೇರಬೇಕಿತ್ತು. ಆದರೆ, ಭಾನುವಾರವೇ ಕಾರ್ತಿಕ್​ ನಿಶ್ಚಿತಾರ್ಥ ರದ್ದು ಮಾಡಿದ್ದ. ಇದರಿಂದ ತೀವ್ರ ನೊಂದಿದ್ದ ಪ್ರಗತಿ ಮಂಗಳವಾರ ಬೆಳಗ್ಗೆ 3 ಗಂಟೆ ಸುಮಾರಿಗೆ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವಿನ ಹಾದಿ ಹಿಡಿದಿದ್ದಾಳೆ.

ಬೆಳಗ್ಗೆ ನಿದ್ದೆಯಿಂದ ಎಚ್ಚರಗೊಂಡ ಪ್ರಗತಿ ತಾಯಿ, ಮಗಳನ್ನು ನೋಡಲು ಹೋದಾಗ ಫ್ಯಾನಿನಲ್ಲಿ ನೇತಾಡುತ್ತಿದ್ದ ಆಕೆಯ ಶವವನ್ನು ನೋಡಿ ಕುಸಿದುಬಿದ್ದರು. ಇತ್ತ ಮಾಹಿತಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಗತಿಯನ್ನು ಮೊಬೈಲ್​ ಫೋನ್​ ವಶಕ್ಕೆ ಪಡೆದಿರುವ ಪೊಲೀಸರು ಸಾವಿಗೆ ನಿಶ್ಚಿತಾರ್ಥ ಬಿಟ್ಟು ಬೇರೆ ಯಾವುದಾದರೂ ಕಾರಣ ಇದೆಯಾ ಎಂದು ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಹೈದರಾಬಾದ್​ನ ಒಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ವರದಿಗಾಗಿ ಕಾಯುತ್ತಿದ್ದಾರೆ. ನಿಶ್ಚಿತಾರ್ಥ ಏಕೆ ರದ್ದಾಯಿತು ಎಂಬುದಕ್ಕೆ ಇನ್ನು ಯಾವುದೇ ಸ್ಪಷ್ಟನೆ ದೊರೆತಿಲ್ಲ. ಪ್ರಕರಣ ದಾಖಲಾಗಿದ್ದು, ಕಾರ್ತಿಕ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರೆ, ಕಾರಣ ತಿಳಿಯಲಿದೆ. (ಏಜೆನ್ಸೀಸ್​)