ನ್ಯೂಸ್

ದೋಣಿಯಾಟದ ವೇಳೆ ನದಿಯಲ್ಲಿ ಪತ್ತೆಯಾಯ್ತು ಐಫೋನ್: ಸ್ವಿಚ್​ ಆನ್​ ಮಾಡಿದಾಗ ಕಾದಿತ್ತು ಶಾಕ್​!

ಲಂಡನ್​: ಕೈ ಜಾರಿ ಕೆರೆ ಅಥವಾ ನದಿಗೆ ಬಿದ್ದ ಮೊಬೈಲ್​ ಫೋನ್​ 10 ತಿಂಗಳ ಬಳಿಕ ಪತ್ತೆಯಾದರೆ, ಅದರ ಸ್ಥಿತಿ ಹೇಗಿರುತ್ತದೆ? ಎಂದು ಪ್ರಶ್ನಿಸಿದರೆ, ಬಹುತೇಕರ ಉತ್ತರ ಹೇಗಿರುತ್ತದೆ ಅಂದರೆ, ಕೆಲವೇ ಗಂಟೆಗಳು ನೀರಿನೊಳಗಿದ್ದರೆ, ಮೊಬೈಲ್ ಉಳಿಯುವುದಿಲ್ಲ. ಅಂತಹುದರಲ್ಲಿ 10 ತಿಂಗಳ ನೀರಿನೊಳಗಡೆ ಇದ್ರೆ ಆ ಮೊಬೈಲ್​ ಸಂಪೂರ್ಣ ಕೆಟ್ಟು ಹೋಗಿರುತ್ತದೆ ಎನ್ನುತ್ತಾರೆ.

ಆದರೆ, ಈ ಒಂದು ಪ್ರಕರಣದಲ್ಲಿ ನಡೆದಿದ್ದೇ ಬೇರೆ. 10 ತಿಂಗಳ ಹಿಂದೆ ನದಿಯಲ್ಲಿ ಕಳೆದು ಹೋಗಿದ್ದ ಮೊಬೈಲ್​ ಪತ್ತೆಯಾಗಿದೆ. ಅಚ್ಚರಿಯೆಂದರೆ, ಅದಿನ್ನೂ ಚೆನ್ನಾಗಿಯೇ ಕಾರ್ಯ ನಿರ್ವಹಿಸುತ್ತಿದೆ. ಇದೇನು ಕಲ್ಪನೆಯಲ್ಲ. ನಿಜವಾಗಿಯೂ ನಡೆದಿದೆ.

ವಿವರಣೆಗೆ ಬರುವುದಾದರೆ, ಯುಕೆ ಮೂಲದ ಓವೈನ್ ಡೇವಿಸ್, 10 ತಿಂಗಳ ಹಿಂದೆ ಗ್ಲೌಸೆಸ್ಟರ್‌ಶೈರ್​ನ ಸಿಂಡರ್ಫೋರ್ಡ್ ಬಳಿಯಿರುವ ವೈ ನದಿಯಲ್ಲಿ ಆಕಸ್ಮಿಕವಾಗಿ ತಮ್ಮ ಐಫೋನ್​ ಕಳೆದುಕೊಂಡಿದ್ದರು. 2021ರ ಆಗಸ್ಟನಲ್ಲಿ ಬ್ಯಾಚುಲರ್​ ಪಾರ್ಟಿ ವೇಳೆ ಮೊಬೈಲ್​ ಕಳೆದುಹೋಗಿತ್ತು. ನದಿಯಲ್ಲಿ ಬಿದ್ದ ಫೋನ್​ ಮತ್ತೆ ಸಿಗುವುದಿಲ್ಲ ಅಂದುಕೊಂಡು ಬೇಸರದಿಂದಲೇ ಮನೆಗೆ ವಾಪಾಸ್​ ಆಗಿದ್ದರು.

ಇದು ನಡೆದ ಸುಮಾರು 10 ತಿಂಗಳ ಬಳಿಕ ಅದೇ ನದಿಗೆ ತಮ್ಮ ಕುಟುಂಬದ ಜತೆ ದೋಣಿಯಾಟಕ್ಕೆ ತೆರಳಿದ್ದ ಮಿಗುಯೆಲ್ ಪಚೆಕೊ ಎಂಬುವರು ಓವೈನ್ ಡೇವಿಸ್​ಗೆ ಕರೆ ಮಾಡಿದ್ದಾರೆ. ದೋಣಿಯಲ್ಲಿ ಹೋಗುವಾಗ ಮಿಗುಯೆಲ್​ಗೆ ಡೇವಿಸ್ ಅವರ ಐಫೋನ್ ಕಣ್ಣಿಗೆ ಬಿದ್ದಿದೆ. ಬಳಿಕ ಅದನ್ನು ನದಿಯಿಂದ ಎತ್ತಿಕೊಂಡಿದ್ದಾರೆ.

ಮೊದಲೇ ನೀರಿನಲ್ಲಿ ಮಿಂದಿದ್ದ ಮೊಬೈಲ್​ ಫೋನ್​ ರಿಸ್ಟಾರ್ಟ್​ ಆಗುವುದು ಅನುಮಾನ ಎಂದು ಮಿಗುಯೆಲ್​ ಭಾವಿಸಿದ್ದರು. ಆದರೂ, ಒಂದು ಪ್ರಯತ್ನ ಮಾಡೋಣ, ಫೋನ್​ನಲ್ಲಿ ಭಾವನಾತ್ಮಕ ವಿಷಯಗಳಿರಬಹುದು ಅಂತಾ ಫೋನ್​ನಲ್ಲಿ ಮೊದಲು ಒಣಗಿಸುತ್ತಾರೆ. ಬಳಿಕ ಫೋನ್​ ಚಾರ್ಜ್​ಗೆ ಹಾಕಿದಾಗ ಮಿಗುಯೆಲ್​. ಒಂದು ಕ್ಷಣ ತಮ್ಮನ್ನು ಕಣ್ಣನ್ನು ತಾವೇ ನಂಬುವುದಿಲ್ಲ. ಏಕೆಂದರೆ, ಚೆನ್ನಾಗಿಯೇ ಚಾರ್ಜ್​ ಆಗುತ್ತಿರುತ್ತದೆ. ಸ್ವಲ್ಪ ಹೊತ್ತು ಬಿಟ್ಟು ಸ್ವಿಚ್​ ಆನ್​ ಮಾಡಿದಾಗ ಮೊಬೈಲ್​ ಸ್ಕ್ರೀನ್​ನಲ್ಲಿ ದಂಪತಿ ಫೋಟೋ ಇರುವುದುನ್ನು ನೋಡುತ್ತಾರೆ. ಆಗಸ್ಟ್​ 13ರ ದಿನಾಂಕ ವಿರುತ್ತದೆ. ಬಹುಶಃ ಅದೇ ದಿನದಂದು ಮೊಬೈಲ್​ ನೀರಲ್ಲಿ ಬಿದ್ದಿರಬಹುದೆಂದು ಭಾವಿಸುತ್ತಾರೆ. ಇದಾದ ಬಳಿಕ ಮೊಬೈಲ್​ ಫೋಟೋವನ್ನು ತೆಗೆದು ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಮಾಹಿತಿ ಸಮೇತ ಮಿಗುಯೆಲ್​ ಪೋಸ್ಟ್​ ಮಾಡುತ್ತಾರೆ.

ಸುಮಾರು 4000ಕ್ಕೂ ಹೆಚ್ಚು ಮಂದಿ ಮಿಗುಯೆಲ್​ ಪೋಸ್ಟ್​ ಅನ್ನು ಶೇರ್​ ಮಾಡುತ್ತಾರೆ. ಆದರೆ, ಇಲ್ಲಿ ಟ್ವಿಸ್ಟ್​ ಏನೆಂದರೆ, ಮೊಬೈಲ್​ ಕಳೆದುಕೊಂಡ ಡೇವಿಸ್, ಯಾವುದೇ ಸಾಮಾಜಿಕ ಜಾಲತಾಣ ಖಾತೆಯನ್ನೇ ಹೊಂದಿಲ್ಲ. ಡೆವಿಸ್​ ಸ್ನೇಹಿತರೊಬ್ಬರು ಫೇಸ್​ಬುಕ್​ ಪೋಸ್ಟ್​ ನೋಡಿ ಮಾಹಿತಿ ನೀಡುತ್ತಾರೆ. ತಕ್ಷಣ ಡೆವಿಸ್​, ಮಿಗುಯೆಲ್​ ಅವರನ್ನು ಸಂಪರ್ಕಿಸಿ ತಮ್ಮ ಮೊಬೈಲ್​ ಅನ್ನು ಮರಳಿ ಪಡೆದುಕೊಳ್ಳುತ್ತಾರೆ. (ಏಜೆನ್ಸೀಸ್​​)