ನ್ಯೂಸ್

ಯುದ್ಧದಲ್ಲಿ ಸಾಯುವ ಮುನ್ನ ರಷ್ಯಾ ಯೋಧ ತನ್ನ ತಾಯಿಗೆ ಕಳುಹಿಸಿರುವ ಸಂದೇಶ ಮನಕಲಕುವಂತಿದೆ..!

ಕೀಯೆವ್​/ಮಾಸ್ಕೋ: ಸಾವಿಗೂ ಮುನ್ನ ರಷ್ಯಾ ಸೈನಿಕನೊಬ್ಬ ತನ್ನ ತಾಯಿಗೆ ಕಳುಹಿಸಿರುವ ಸಂದೇಶ ಮನಕಲಕುವಂತಿದೆ. ಯೂಕ್ರೇನ್​ ಮೇಲೆ ರಷ್ಯಾ ಘೋಷಿಸಿರುವ ಯುದ್ಧದಿಂದ ಯೂಕ್ರೇನ್​ನಲ್ಲಿ ಉಂಟಾಗಿರುವ ಭೀಕರತೆಯನ್ನು ತನ್ನ ತಾಯಿಗೆ ತಿಳಿಸಿರುವ ಯೋಧನ ಸಂದೇಶವನ್ನು ವಿಶ್ವಸಂಸ್ಥೆಯಲ್ಲಿ ಯೂಕ್ರೇನ್​ ರಾಯಭಾರಿ ಓದಿದ್ದಾರೆ.

ತಾಯಿ ಮತ್ತು ಯೋಧನ ನಡುವಿನ ಸಂದೇಶ ವಿನಿಮಯದ ಸಾರಾಂಶ ಹೀಗಿದೆ. ಯಾಕೆ ಇಷ್ಟೊಂದು ತಡವಾಗುತ್ತಿದೆ. ನಿನಗೇನಾದರೂ ಪಾರ್ಸೆಲ್​ ಕಳುಹಿಸಬಹುದೇ ಎಂದು ತಾಯಿ ತನ್ನ ಮಗನನ್ನು ಕೇಳುತ್ತಾಳೆ. ಇದಕ್ಕೆ ಪ್ರತಿಕ್ರಿಯಿಸುವ ಮಗ ನಾನೀಗ ಯೂಕ್ರೇನ್​ನಲ್ಲಿದ್ದೇನೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಅನಿಸುತ್ತಿದೆ ಎಂಬ ನೋವಿನ ಮಾತುಗಳನ್ನಾಡಿದ್ದಾರೆ.

ಯೂಕ್ರೇನಿಯನ್ನರು ನಮ್ಮನ್ನು ಸ್ವಾಗತಿಸುತ್ತಾರೆ ಎಂದು ತಿಳಿಸಲಾಯಿತು. ಆದರೆ, ಅವರು ನಮ್ಮ ಶಸ್ತ್ರಸಜ್ಜಿತ ವಾಹನಗಳ ಕೆಳಗೆ ಬಿದ್ದು ನುಜ್ಜುಗುಜ್ಜಾಗುತ್ತಿದ್ದಾರೆ. ನಮ್ಮನ್ನು ಮುಂದೆ ಹೋಗಲು ಬಿಡದಂತೆ ಚಕ್ರದ ಕೆಳಗೆ ಸಿಲುಕುತ್ತಿದ್ದಾರೆ. ಯೂಕ್ರೇನ್​ನ ನಾಗರಿಕರನ್ನೂ ಗುರಿಯಾಗಿಸಿ ಹತ್ಯೆ ಮಾಡಲಾಗುತ್ತಿದೆ. ಎಲ್ಲೆಡೆ ಬಾಂಬ್​ ದಾಳಿ ಮಾಡಲಾಗುತ್ತಿದೆ. ನಮ್ಮನ್ನು ಭಯೋತ್ಪಾದಕರು ಎಂದು ಯೂಕ್ರೇನಿಯನ್ನರು ಕರೆಯುತ್ತಿದ್ದಾರೆ. ಅಮ್ಮ ಇದು ನಿಜಕ್ಕೂ ಕಠಿಣವಾಗಿದೆ. ಯುದ್ಧ ಪರಿಸ್ಥಿತಿ ಕೈಮೀರಿದೆ ಎಂದು ಯುದ್ಧಕ್ಕೂ ಮೊದಲು ಕ್ರೈಮಿಯಾದಲ್ಲಿದ್ದ ರಷ್ಯಾದ ಸೈನಿಕನೊಬ್ಬ ತನ್ನ ತಾಯಿಗೆ ಸಂದೇಶ ಕಳುಹಿಸಿದ್ದು, ಯುದ್ಧದಲ್ಲಿ ಯೋಧ ಕೊನೆಯುಸಿರೆಳೆದಿದ್ದಾನೆ.

ಈ ಸಂದೇಶವನ್ನು ವಿಶ್ವಸಂಸ್ಥೆಯ ಯೂಕ್ರೇನ್​ ರಾಯಭಾರಿ ಸಾಮಾನ್ಯ ಸಭೆಯಲ್ಲಿಂದು ಓದಿದರು. ಈಗಾಗಲೇ ಕೊಲ್ಲಲಾದ ರಷ್ಯಾ ಯೋಧರ 30ಕ್ಕೂ ಹೆಚ್ಚು ಆತ್ಮಗಳು ಸಾಮಾನ್ಯ ಸಭೆಯಲ್ಲಿರುವ ಪ್ರತಿಯೊಂದು ದೇಶದ ನಾಮಫಲಕದ ಪಕ್ಕದಲ್ಲೇ ಇದೆ ಎಂಬುದನ್ನು ಊಹಿಸಿಕೊಳ್ಳಿ ಎಂದು ಹೇಳಿದರು.

ಸುಮಾರು 4500ಕ್ಕೂ ಹೆಚ್ಚು ರಷ್ಯಾ ಯೋಧರನ್ನು ಈವರೆಗೂ ಹತ್ಯೆ ಮಾಡಲಾಗಿದೆ ಎಂದು ಯೂಕ್ರೇನ್​ ಹೇಳಿದೆ. ರಷ್ಯಾ ಮತ್ತು ಯೂಕ್ರೇನ್​ ನಡುವಿನ ಸಂಧಾನ ವಿಫಲವಾಗಿದ್ದು, ಮತ್ತೆ ಯುದ್ಧ ಮುಂದುವರಿದಿದೆ. ಭಾರೀ ಸಂಖ್ಯೆಯಲ್ಲಿ ಸೇನೆ ನಿಯೋಜಿಸಿರುವ ರಷ್ಯಾ ಯೂಕ್ರೇನ್​ ವಿರುದ್ಧ ತೀವ್ರ ದಾಳಿಯನ್ನು ನಡೆಸುತ್ತಿದೆ. ರಷ್ಯಾ ನಡೆಯ ವಿರುದ್ಧ ವಿಶ್ವವ್ಯಾಪಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. (ಏಜೆನ್ಸೀಸ್​)