ನ್ಯೂಸ್

ಕೇಳಬಾರದ ಪ್ರಶ್ನೆ ಕೇಳಿ ನಟಿ ಮಾಳವಿಕರಿಂದ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡ ನೆಟ್ಟಿಗ..!

ಚೆನ್ನೈ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್​ ಮಾಡುವ ಹಾಗೂ ಇಲ್ಲಸಲ್ಲದ್ದನ್ನು ಕೇಳಿ ಬೇಸರ ಉಂಟು ಮಾಡುವ ಚಾಳಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ನಟಿಯರ ಮನಸ್ಸು ಕದಡುವಂತಹ ಕಾಮೆಂಟ್​ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ. ಒಂದಿಷ್ಟು ನಟಿಯರು ಕಾಮೆಂಟ್​ಗಳನ್ನು ನಿರ್ಲಕ್ಷಿಸಿದರೆ, ಇನ್ನೊಂದಿಷ್ಟು ನಟಿಯರು ತಮ್ಮ ವಿರುದ್ಧದ ಕಾಮೆಂಟ್​ಗಳಿಗೆ ತಕ್ಕ ಉತ್ತರ ನೀಡುವುದನ್ನು ನೋಡಿದ್ದೇವೆ.

ಇದೀಗ ಅದೇ ರೀತಿಯ ಕಾಮೆಂಟ್​ಗೆ ಸೌತ್​ ಬ್ಯೂಟಿ ಮಾಳವಿಕ ಮೋಹನನ್​ ಉತ್ತರ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಮಾಳವಿಕ, ಆಗಾಗ ಅಭಿಮಾನಿಗಳ ಜತೆ ಸಂವಹನ ನಡೆಸುತ್ತಿರುತ್ತಾರೆ. ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ “ಆಸ್ಕ್​ ಮಿ ಎನಿಥಿಂಗ್​” ಸೆಷನ್ಸ್​ ನಡೆಸಿದ್ದರು. ಯಾವುದೇ ಪ್ರಶ್ನೆಗಳನ್ನು ಮುಕ್ತವಾಗಿ ಕೇಳಲು ನೆಟ್ಟಿಗರಿಗೆ ಕೇಳಿದ್ದರು.

ಅನೇಕರು ಮಾಳವಿಕಗೆ ಪ್ರಶ್ನೆಗಳನ್ನು ಕೇಳಿದ್ದರು. ಅದಕ್ಕೆ ನಯವಾಗಿಯೇ ಮಾಳವಿಕ ಉತ್ತರ ನೀಡಿದ್ದರು. ಈ ವೇಳೆ ನೆಟ್ಟಿಗನೊಬ್ಬ ಕೇಳಬಾರದ ಪ್ರಶ್ನೆಗಳನ್ನು ಕೇಳಿ ನಟಿಯನ್ನು ಕೆಣಕಿದ್ದಾನೆ. ಆತನ ಪ್ರಶ್ನೆ ಹೀಗಿತ್ತು, ಮಾರನ್​ ಸಿನಿಮಾದಲ್ಲಿ ಬೋಲ್ಡ್​ ಅಥವಾ ಇಂಟಿಮೇಟ್​ ದೃಶ್ಯವನ್ನು ಎಷ್ಟು ಬಾರಿ ಶೂಟ್​ ಮಾಡಿದ್ರಿ ಎಂದು ನೆಟ್ಟಿಗ ಕೇಳಿದ್ದಾನೆ.

ಇದಕ್ಕೆ ಖಡಕ್​ ಆಗಿ ಉತ್ತರ ನೀಡಿದ ಮಾಳವಿಕ, ನಿಮ್ಮ ತಲೆಯ ಒಳಭಾಗವು ನಿಜವಾಗಿಯೂ ದುಃಖದ ಸ್ಥಳವಾಗಿದೆ ಎನ್ನುವ ಮೂಲಕ ನಿನ್ನ ತಲೆಯಲ್ಲಿ ಬರೀ ಕೆಟ್ಟದ್ದೇ ತುಂಬಿದೆ ಎಂದು ತಿರುಗೇಟು ನೀಡಿದ್ದಾರೆ. ಇದೀಗ ಮಾಳವಿಕ ನೀಡಿದ ಉತ್ತರದ ಸ್ಕ್ರೀನ್​ ಶಾಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಮಾಳವಿಕ ದಕ್ಷಿಣ ಭಾರತ ಸಿನಿರಂಗದಲ್ಲಿ ದಿನೇ ದಿನೆ ತಮ್ಮ ಖ್ಯಾತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ನಟ ವಿಜಯ್​ ನಟನೆಯ ಮಾಸ್ಟರ್​ ಚಿತ್ರದ ಮೂಲಕ ಮಾಳವಿಕ ಒಳ್ಳೆಯ ಹೆಸರು ಗಳಿಸಿದ್ದಾರೆ. ಇತ್ತೀಚೆಗಷ್ಟೇ ಮಾರನ್​ ಸಿನಿಮಾದಲ್ಲಿ ಧನುಸ್ಸ್​ ಜೊತೆ ನಟಿಸಿದ್ದರು. (ಏಜೆನ್ಸೀಸ್​)