ನ್ಯೂಸ್

ಸಿಎಂ ಯೋಗಿ ಕಾರ್ಯಕ್ರಮಕ್ಕೆ ರಿವಾಲ್ವರ್​ ಸಮೇತ ನುಗ್ಗಿದ ವ್ಯಕ್ತಿ: ನಾಲ್ವರು ಪೊಲೀಸ್​ ಸಿಬ್ಬಂದಿ ಅಮಾನತು

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಬಹುದೊಡ್ಡ ಭದ್ರತಾ ಲೋಪ ಕಂಡುಬಂದಿದೆ. ಮಂಗಳವಾರ ಬಸ್ತಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದ ಸ್ಥಳಕ್ಕೆ ಸಿಎಂ ಯೋಗಿ ಬರುವ ಮುಂಚೆಯೇ ವ್ಯಕ್ತಿಯೊಬ್ಬ ಪರವಾನಗಿ ಪಡೆದ ಗನ್​ ಹಿಡಿದು ಒಳನುಸುಳಿರುವುದು ಬೆಳಕಿಗೆ ಬಂದಿದೆ. ​

ಗನ್​ ಹಿಡಿದ ವ್ಯಕ್ತಿಯನ್ನು ಆಡಿಟೋರಿಯಂ ಒಳಗೆ ಕಂಡಕೂಡಲೇ ಆತನನ್ನು ತಕ್ಷಣ ಅಲ್ಲಿಂದ ಭದ್ರತಾ ಸಿಬ್ಬಂದಿ ದೂರ ಕರೆದೊಯ್ದಿದ್ದಾರೆ. ಇದನ್ನು ಬಹುದೊಡ್ಡ ಭದ್ರತಾ ಲೋಪ ಎಂದು ಪರಿಗಣಿಸಿರುವ ಸರ್ಕಾರ ನಾಲ್ವರು ಪೋಲಿಸ್​ ಸಿಬ್ಬಂದಿಯನ್ನು ಅಮಾನತು ಮಾಡಿದೆ.

ಸಿಎಂ ಯೋಗಿ ಅವರ ಮಂಗಳವಾರ ಬಸ್ತಿ ಜಿಲ್ಲೆಯಲ್ಲಿರುವ ಅಟಲ್​ ಬಿಹಾರಿ ವಾಜಪೇಯಿ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಭದ್ರತೆಯಾಗಿ ಸ್ಥಳೀಯ ಪೊಲೀಸ್​ ಠಾಣೆ ಹಾಗೂ ಜಿಲ್ಲೆಯ ಇತರೆ ಠಾಣೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸಿಎಂ ಯೋಗಿ ಆದಿತ್ಯನಾಥ್​​ ಬರುವ 45ಕ್ಕೂ ಮುಂಚೆಯೇ ಅದೇ ಜಿಲ್ಲೆಯ ಗೌರ್​ ಬ್ಲಾಕ್​ ಪ್ರತಿನಿಧಿ ಜಾತ್ಶಂಕರ್​ ಶುಕ್ಲ ಎಂಬಾತ ಆಡಿಟೋರಿಯಂನಲ್ಲಿದ್ದ.

ಜಾತ್ಶಂಕರ್​ ಶುಕ್ಲ ಅವರ ಕಿರಿಯ ಸಹೋದರ ಅಮರ್​ದೀಪ್​ ಅವರ ಬಾಮೈದ ಜೀತೇಂದರ್​ ಪಾಂಡೆ ಲೈಸೆನ್ಸ್​ ಪಡೆದಿದ್ದ ರಿವಾಲ್ವರ್​ ಹಿಡಿದು ಆಡಿಟೋರಿಯಂಗೆ ಮುಂಚೆಯೇ ಆಗಮಿಸಿದ್ದ. ಆನಂತರ ರಿವಾಲ್ವರ್​ ಗಮನಿಸಿದ ಪೊಲೀಸ್​ ಸಿಬ್ಬಂದಿ ಜೀತೇಂದರ್​ ಪಾಂಡೆ ಸಮೇತ ಗನ್​ ಅನ್ನು ವಶಕ್ಕೆ ಪಡೆದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್​ ಹಿರಿಯ ಅಧಿಕಾರಿ ಕರ್ತವ್ಯ ನಿರ್ಲಕ್ಷ್ಯ ಆರೋಪದಲ್ಲಿ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ. (ಏಜೆನ್ಸೀಸ್​)