ಕಾಬುಲ್: ತಾಲಿಬಾನ್ ನೀಡಿದ ಡೆಡ್ಲೈನ್ ಪ್ರಕಾರವೇ ಅಮೆರಿಕ ಸೇನಾ ಪಡೆಗಳು ಅಫ್ಘಾನಿಸ್ತಾನವನ್ನು ತೊರೆದಿವೆ. ಸೋಮವಾರ ಮಧ್ಯರಾತ್ರಿ ಕಾಬುಲ್ ತೊರೆಯುವ ಮೂಲಕ ಆಫ್ಘಾನ್ನಲ್ಲಿನ 20 ವರ್ಷದ ಸಂಘರ್ಷಕ್ಕೆ ಅಮೆರಿಕ ಅಂತ್ಯವಾಡಿದೆ. ಇದಕ್ಕೆ ಸಂಬಂಧಿಸಿದ ಫೋಟೋವೊಂದನ್ನು ಅಮೆರಿಕ ಸೇನೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ಅಮೆರಿಕದ ಆರ್ಮಿ ಮೇಜರ್ ಜನರಲ್ ಕ್ರಿಸ್ ಡೊನಾಹು ಆಫ್ಘಾನ್ ನೆಲದಿಂದ ಹೊರ ನಡೆದ ಕೊನೆಯ ಅಮೆರಿಕ ಯೋಧರಾಗಿದ್ದಾರೆ.
ನೈಟ್ ವಿಸನ್ ಆಪ್ಟಿಕ್ ಛಾಯಾಚಿತ್ರದಲ್ಲಿರುವಂತೆ 82ನೇ ವಾಯುಗಾಮಿ ವಿಭಾಗದ ಕಮಾಂಡರ್ ಜನರಲ್ ಕ್ರಿಸ್ ಡೊನಾಹ್ಯೂ, ಕಾಬೂಲ್‌ನಿಂದ ಹೊರಟ ಕೊನೆಯ ಸೈನಿಕರಾರಾಗಿದ್ದು, XVIII ವಾಯುಗಾಮಿ ಕಾರ್ಪ್ಸ್ ಕರೆಯುತ್ತಿದ್ದಂತೆ ಸೇನಾ ವಿಮಾನದಲ್ಲಿ ಹತ್ತಿದಂತೆ ತೋರಿಸಿತು. ಕ್ರಿಸ್ ಡೊನಾಹ್ಯೂ ನಿರ್ಗಮನದಿಂದ ಎರಡು ವಾರಗಳ ತ್ವರಿತಗತಿಯ ಸ್ಥಳಾಂತರ ಪ್ರಕ್ರಿಯೆ ಕೊನೆಗೊಂಡಂತಾಗಿದೆ. ಯುಎಸ್ ಮತ್ತು ನ್ಯಾಟೋ ಪಡೆಗಳು ಕಳೆದ ಎರಡು ವಾರಗಳಿಂದ ಸ್ಥಳಾಂತರ ಕೆಲಸದಲ್ಲಿ ತೊಡಗಿಕೊಂಡಿದ್ದವು.
ಆಗಸ್ಟ್ 31ರ ಒಳಗೆ ಕಾಬುಲ್ ಖಾಲಿ ಮಾಡುವಂತೆ ಯುಎಸ್ ಪಡೆಗೆ ತಾಲಿಬಾನ್ ಡೆಡ್ಲೈನ್ ನೀಡಿತ್ತು. ತಾಲಿಬಾನ್ ರಕ್ತಪಿಪಾಸುಗಳು ಕಾಬುಲ್ ವಶಕ್ಕೆ ಪಡೆದಾಗಿನಿಂದ ಒಂದು ಅಂದಾಜಿನ ಪ್ರಕಾರ ಸುಮಾರು 122,000 ಮಂದಿಯನ್ನು ಆಗಸ್ಟ್ 14ರಿಂದ ಇಲ್ಲಿಯವರೆಗೆ ಅಮೆರಿಕ ಏರ್ಲಿಫ್ಟ್ ಮಾಡಿದೆ.
ಕಾಬೂಲ್‌ನಿಂದ ಕೊನೆಯ ಯುಎಸ್ ಸ್ಥಳಾಂತರಿಸುವ ವಿಮಾನವು ಹೊರಡುತ್ತಿದ್ದಂತೆ ತಾಲಿಬಾನ್‌ಗಳು, ಅಫ್ಘಾನಿಸ್ತಾನಕ್ಕೆ "ಸಂಪೂರ್ಣ ಸ್ವಾತಂತ್ರ್ಯ" ಸಿಕ್ಕಿದೆ ಎಂದು ಘೋಷಿಸಿ ನಗರದಲ್ಲಿ ಸಂಭ್ರಮದ ಗುಂಡಿನ ಮಳೆಗೆರೆದರು. (ಏಜೆನ್ಸೀಸ್)