ನ್ಯೂಸ್

ಈ ಯುವತಿ ತನ್ನನ್ನು ತಾನೇ ಮದ್ವೆಯಾಗಿದ್ದರ ಹಿಂದಿನ ಉದ್ದೇಶ ಇದೇನಾ? ಅನುಮಾನಕ್ಕೆ ಪುಷ್ಟಿ ನೀಡಿದ ಅಂಶವಿದು!

ಅಹಮದಾಬಾದ್: ಇತ್ತೀಚೆಗೆ ತನ್ನನ್ನು ತಾನೇ ಮದುವೆಯಾಗುವುದಾಗಿ ಹೇಳಿ ಭಾರೀ ಸುದ್ದಿಯಾಗಿದ್ದ ಗುಜರಾತಿನ ವಡೋದರಾ ಮೂಲದ ಕ್ಷಮಾ ಬಿಂದು, ಗುರುವಾರ (ಜೂ.9) ತಾನು ಹೇಳಿದಂತೆಯೇ ಮದುವೆಯಾಗಿದ್ದಾಳೆ. ಗಮನಾರ್ಹ ಸಂಗತಿಯೆಂದರೆ ಏಕವ್ಯಕ್ತಿ ವಿವಾಹ ಸುದ್ದಿಯಾದಾಗಿನಿಂದ ಕ್ಷಮಾ ಅವರ ಸಾಮಾಜಿಕ ಜಾಲತಾಣ ಹಿಂಬಾಲಕರ ಸಂಖ್ಯೆಯು ಭಾರೀ ಸಂಖ್ಯೆಯಲ್ಲಿ ಹೆಚ್ಚಾಗಿದೆ.

ಶಾಸ್ತ್ರ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿರುವ ಕ್ಷಮಾ, ಮದುವೆಯಲ್ಲಿ ಸ್ನೇಹಿತರು, ಅತಿಥಿಗಳು ಪಾಲ್ಗೊಂಡಿದ್ದರು. ಆಕೆ ಈ ಮುಂಚೆ ಹೇಳಿದಂತೆ ಈ ಮದುವೆಯಲ್ಲಿ ವರ ಮಾತ್ರ ಇರಲಿಲ್ಲ. ಜೂನ್​ 11 ಕ್ಕೆ ಮದುವೆಯಾಗುವುದಾಗಿ ಘೋಷಿಸಿಕೊಂಡಿದ್ದ ಕ್ಷಮಾ, ಹಲವು ವಿವಾದಗಳ ಕಾರಣದಿಂದ ಜೂನ್​ 9 ರಂದೇ ಮದುವೆಯಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಹನಿಮೂನ್​​ಗೂ ಸಹ ಹೋಗಲಿದ್ದೇನೆ. ನನ್ನ ನಂಬಿಕೆ ಹಾಗೂ ಭರವಸೆಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಕ್ಷಮಾ ಹೇಳಿದ್ದಾರೆ.

ಇನ್ನು ಕ್ಷಮಾ ತನ್ನ ವಿನೂತನ ನಡೆಯಿಂದಲೇ ದೇಶಾದ್ಯಂತ ಭಾರಿ ಸುದ್ದಿಯಾಗುವುದರ ಜತೆಗೆ ಖ್ಯಾತಿಯನ್ನು ಹೆಚ್ಚಿಕೊಂಡಿದ್ದಾರೆ. ಕಳೆದ ಒಂದು ವಾರದಿಂದ ಬರೋಬ್ಬರಿ 10 ಸಾವಿರ ಫಾಲೋವರ್ಸ್​ ಅನ್ನು ಇನ್​ಸ್ಟಾಗ್ರಾಂನಲ್ಲಿ ಹೆಚ್ಚಿಸಿಕೊಂಡಿದ್ದಾರೆ. ಜೂನ್​ 2ರಂದು ಕ್ಷಮಾ ಅವರ ಇನ್​ಸ್ಟಾಗ್ರಾಂನಲ್ಲಿ ಫಾಲೋವರ್ಸ್​ ಸಂಖ್ಯೆ 17,900 ಇತ್ತು. ಇದೀಗ ಆ ಸಂಖ್ಯೆ 27,800ಕ್ಕೆ ಏರಿಕೆಯಾಗಿದೆ ಮತ್ತು ಏರಿಕೆಯಾಗುತ್ತಲೇ ಇದೆ. ಆದರೆ, ಫಾಲೋವರ್ಸ್​ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಕ್ಷಮಾ ಹಿಡಿದಿರುವ ದಾರಿ ಇದು ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

ಬಿಜೆಪಿಯ ವಡೋದರಾ ಘಟಕದ ಬಿಜೆಪಿ ಉಪಾಧ್ಯಕ್ಷೆ ಸುನಿತಾ ಶುಕ್ಲಾ ಅವರು ಯಾವುದೇ ದೇವಸ್ಥಾನದಲ್ಲಿ ಇಂತಹ ಮದುವೆಯನ್ನು ನಡೆಸಲು ಬಿಡುವುದಿಲ್ಲ ಎಂದಿದ್ದರು ಮತ್ತು ಪ್ರಚಾರದ ಹುಚ್ಚಿನಿಂದ ಕ್ಷಮಾ ಬಿಂದು ಈ ರೀತಿ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು. ತನ್ನ ವಿಚಿತ್ರ ನಿಲುವಿನ ಮೂಲಕ ಹಿಂದು ಯುವಕರ ಮನಸ್ಸನ್ನು ಕಲುಷಿತಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್​)