ಕೊಚ್ಚಿ: ಸುಮಾರು 70 ಕಿ.ಮೀ ವೇಗದಲ್ಲಿ ಹೋಗುತ್ತಿದ್ದ ಟಾಟಾ ಟಿಯಾಗೋ ಕಾರು 25 ಅಡಿ ಆಳದ ಕಂದಕಕ್ಕೆ ಬಿದ್ದರೂ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಯಾವುದೇ ಹಾನಿಯಾಗದೇ ಬದುಕುಳಿದಿದ್ದಾರೆ. ಅಪಘಾತಕ್ಕೀಡಾದ ಕಾರಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಾರಿನ ಗುಣಮಟ್ಟಕ್ಕೆ ನೆಟ್ಟಿಗರು ಸಲಾಂ ಹೊಡೆದಿದ್ದಾರೆ.
ಕಾರಿನ ಒಳಗೆ ಮುಂಭಾಗದಲ್ಲಿದ್ದ ಏರ್ಬ್ಯಾಗ್ ತೆರೆದುಕೊಂಡಿದ್ದರಿಂದ ಯಾರಿಗೂ ಯಾವುದೇ ಹಾನಿಯಾಗಿಲ್ಲ. ವೇಗವಾಗಿ ಬಂದು 25 ಅಡಿ ಆಳಕ್ಕೆ ಬಿದ್ದರೂ ಅಪಘಾತದ ಸಂತ್ರಸ್ತರಿಗೆ ಒಂದು ಬ್ಯಾಂಡೇಜ್ ಹಾಕುವಷ್ಟೂ ಹಾನಿ ಆಗಿಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ.
ಟಾಟಾ ಟಿಯಾಗೋ ವಾಹನ ಖರೀದಿಸದಂತೆ ಎಲ್ಲರೂ ನನಗೆ ಎಚ್ಚರಿಕೆ ನೀಡಿದ್ದರು ಎಂದು ಮಾಲೀಕರು ಹೇಳಿಕೊಂಡಿದ್ದಾರೆ. ಆದಾಗ್ಯೂ ತಾನು ಕಾರು ಖರೀದಿಸಿದೆ. ನೀವು ಸುರಕ್ಷತೆಗೆ ಆದ್ಯತೆ ನೀಡುವುದಾದರೆ ಟಾಟಾ ಟಿಯಾಗೊವನ್ನು ಖರೀದಿಸಬೇಕು ಎಂದು ಮಾಲೀಕ ಮಾಧ್ಯಮದ ಜೊತೆ ಮಾತನಾಡುವಾಗ ಹೇಳಿದ್ದಾರೆ.
ಅಪಘಾತದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಗ್ರಾಹಕರ ಸುರಕ್ಷತೆಯುಳ್ಳ ಕಾರಿನ ವೈಶಿಷ್ಟ್ಯದಿಂದ ನೆಟ್ಟಿಗರು ಪ್ರಭಾವಿತಗೊಂಡಿದ್ದಾರೆ. ಟ್ವಿಟರ್ ಬಳಕೆದಾರರು "ಟಾಟಾ ಕಾ ಲೋಹಾ!" ಎಂದು ಬರೆದಿದ್ದಾರೆ. ಕೇರಳದ ಘಟನೆ ವೈರಲ್ ಆದ ನಂತರ ಜಾಲತಾಣದಲ್ಲಿ ನೆಟ್ಟಿಗರು ಟಾಟಾ ಮೋಟರ್ಸ್ ಅನ್ನು ಹೊಗಳಿದ್ದಾರೆ. (ಏಜೆನ್ಸೀಸ್)