ಪಲಕ್ಕಾಡ್: ಯಾರಿಗೂ ಗೊತ್ತಾಗದಂತೆ ಸುಮಾರು 10 ವರ್ಷಗಳ ಕಾಲ ಪ್ರೇಯಸಿಯನ್ನು ತನ್ನ ಮನೆಯ ಒಂಟಿ ಕೋಣೆಯಲ್ಲಿ ಬಟ್ಟಿಟ್ಟು ಈ ಹಿಂದೆ ಭಾರೀ ಸುದ್ದಿಯಾಗಿದ್ದ ಕೇರಳದ ಲವರ್ ಬಾಯ್, ಕೊನೆಗೂ ಆಕೆಯನ್ನು ಮದುವೆ ಆಗುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾನೆ.
ಆ ಜೋಡಿಯೇ ರೆಹಮಾನ್ ಮತ್ತು ಸಾಜಿತಾ. ಇಬ್ಬರು ಬುಧವಾರ ಪಲಕ್ಕಾಡ್ನ ನೇನ್ಮರದಲ್ಲಿ ರಿಜಿಸ್ಟರ್ ಮದುವೆಯಾಗಿದ್ದಾರೆ. ಸರಳವಾದ ಹತ್ತಿ ಸಲ್ವಾರ್ ಧರಿಸಿದ್ದ ಸಜಿತಾ ಹಾಗೂ ಸಾಂಪ್ರದಾಯಿಕ ಧೋತಿ ಮತ್ತು ಶರ್ಟ್‌ನಲ್ಲಿ ಕಾಣಿಸಿಕೊಂಡ ರೆಹಮಾನ್ ಒಟ್ಟಿಗೆ ಮದುವೆ ದಾಖಲೆಗಳಿಗೆ ಸಹಿ ಮಾಡುವಾಗ ಇಬ್ಬರ ಮುಖದಲ್ಲಿ ಸಂತೋಷ ಮತ್ತು ಸುರಕ್ಷಿತ ಭಾವ ಕಾಣುತ್ತಿತ್ತು. ಮದುವೆ ಬಳಿಕ ಎಲ್ಲರಿಗೂ ಸಿಹಿ ಹಂಚಿ ತಮ್ಮನ್ನು ಬೆಂಬಲಿಸಿದ್ದಕ್ಕೆ ಧನ್ಯವಾದ ತಿಳಿಸಿದರು.
ಮದುವೆ ಬಳಿಕ ಮಾತನಾಡಿದ ರೆಹಮಾನ್, ನಾವಿಬ್ಬರು ಸಂತೋಷದ ಮತ್ತು ಶಾಂತಿಯುತ ಜೀವನ ನಡೆಸಬೇಕೆಂದು ಬಯಸಿದ್ದೇನೆಂದು ತಿಳಿಸಿದನು. ಸಾಜಿತಾ ಕುಟುಂಬವೂ ಕೂಡ ಮದುವೆಗೆ ಸಾಕ್ಷಿಯಾಗಿತ್ತು. ಆದರೆ, ರೆಹಮಾನ್ ಕುಟುಂಬ ಮದುವೆ ಇಷ್ಟವಿರದ ಕಾರಣ ಅವರು ಅಂತರ ಕಾಯ್ದುಕೊಂಡರು. ನೇನ್ಮಾರಾ ಶಾಸಕ ಕೆ.ಬಾಬು ಕೂಡ ಮದುವೆಯಲ್ಲಿ ಭಾಗಿಯಾಗಿ ಜೋಡಿಗೆ ಶುಭ ಹಾರೈಸಿದರು. ಅಲ್ಲದೆ, ಸ್ವಂತ ಮನೆ ಕಟ್ಟಿಕೊಳ್ಳುವ ಅವರ ಆಸೆಯನ್ನು ನೆರವೇರಿಸಿ ಕೊಡುವುದಾಗಿ ಭರವಸೆ ನೀಡಿದರು.
ಘಟನೆಯ ಹಿನ್ನೆಲೆ
ಕೇರಳದ ಪಲಕ್ಕಾಡ್ ಜಿಲ್ಲೆಯ ಅರಿಯೂರು ಸಮೀಪದ ಕರೈಕ್ಕಟ್ಟುಪರಂಬು ಗ್ರಾಮದಲ್ಲಿ 2010ರ ಫೆಬ್ರವರಿ 2ರಂದು 19 ವರ್ಷದ ಸಾಜಿತಾ ನಾಪತ್ತೆಯಾಗಿದ್ದಳು. ಮಗಳಿಗಾಗಿ ಈಕೆಯ ಪಾಲಕರು ಹುಡುಕಿದ ಜಾಗವಿಲ್ಲ. ಪೊಲೀಸ್ ಠಾಣೆಯಲ್ಲಿ ಸಾಜಿತಾ ನಾಪತ್ತೆ ಕೇಸ್ ಕೂಡ ದಾಖಲಾಗಿತ್ತು. ಪೊಲೀಸರು ಹುಡುಕಾಡಿದರೂ ಪತ್ತೆಯಾಗಲಿಲ್ಲ.
ಆದರೆ, ಆ ಯುವತಿ ಅದೇ ಗ್ರಾಮದ ತನ್ನ ಪ್ರಿಯಕರ ರೆಹಮಾನ್ ಮನೆಯಲ್ಲೇ ಇದ್ದಳು. ಅಂದು ನಾಪತ್ತೆಯಾಗಿದ್ದ ಸಾಜಿತಾಳನ್ನು ರೆಹಮಾನ್ ತನ್ನ ಮನೆಯ ಕೋಣೆಯೊಂದರಲ್ಲಿ ಅಡಗಿಸಿಟ್ಟಿದ್ದ. ಸಾಜಿತಾ ಮತ್ತು ರೆಹಮಾನ್ ಮನೆ ಕೇವಲ 100 ಮೀಟರ್ ಅಂತರದಲ್ಲಿದ್ದರೂ ಯಾರೊಬ್ಬರಿಗೂ 10 ವರ್ಷ ಕಾಲ ಗೊತ್ತೇ ಆಗಿಲ್ಲ. ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ ವೇಳೆ ಕೋಣೆಯ ಕಿಟಕಿ ಮೂಲಕ ಆಕೆಯನ್ನ ಸ್ನಾನಗೃಹ, ಶೌಚಗೃಹಕ್ಕೆ ಕರೆದೊಯ್ಯುತ್ತಿದ್ದ. ತಾನು ಕೋಣೆಯಲ್ಲೇ ಊಟ ಮಾಡುವೆ ಎಂದು ತಟ್ಟೆಗೆ ಊಟ ಹಾಕಿಕೊಂಡು ಹೋಗುತ್ತಿದ್ದವ ತನ್ನ ಪ್ರೇಯಸಿಗೆ ಕೊಡುತ್ತಿದ್ದ. ತನ್ನ ಕೋಣೆಯೊಳಗೆ ಯಾರಿಗೂ ಪ್ರವೇಶ ನೀಡುತ್ತಿರಲಿಲ್ಲ. ಮನೆಯವರು ಏಕೆ? ಏನು ಪ್ರಶ್ನಿಸುವುದನ್ನು ತಪ್ಪಿಸಲು ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಹಾಗಾಗಿ ಮನೆಯವರೂ ಅವನತ್ತ ಹೆಚ್ಚು ಸುಳಿಯುತ್ತಿರಲಿಲ್ಲ. ಕೆಲಸಕ್ಕೆ ಹೋದವ ಬೇಗ ಮನೆಗೆ ಬಂದು ಕೋಣೆ ಸೇರಿಕೊಳ್ಳುತ್ತಿದ್ದ. ಪ್ರೇಯಸಿಯೊಂದಿಗೆ ಕಾಲ ಕಳೆಯುತ್ತಿದ್ದ. ಹೀಗೆ ರಹಸ್ಯ ಕೋಣೆಯಲ್ಲಿ ನಡೆಯುತ್ತಿದ್ದ ಇವರಿಬ್ಬರ ಪ್ರೇಮ್ಕಹಾನಿ ಬಯಲಾಗಿದ್ದೇ ರೋಚಕ.
ಮೂರು ತಿಂಗಳ ಹಿಂದಷ್ಟೆ ರೆಹಮಾನ್ ನಾಪತ್ತೆಯಾಗಿದ್ದ. ಆತಂಕಗೊಂಡ ಪಾಲಕರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಇತ್ತೀಚಿಗೆ ರೆಹಮಾನ್ ತನ್ನ ಸಹೋದರನ ಕಣ್ಣಿಗೆ ಬಿದ್ದಿದ್ದ. ಪೊಲೀಸರಿಗೆ ಈ ವಿಷಯ ಗೊತ್ತಾಗುತ್ತಿದ್ದಂತೆ ರೆಹಮಾನ್ನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದಾಗ ಗೊತ್ತಾಯ್ತು ಪ್ರೇಯಸಿಯನ್ನ ದಶಕ ಕಾಲ ರಹಸ್ಯವಾಗಿ ಕೋಣೆಯಲ್ಲೇ ಇಟ್ಟದ್ದು ಏಕೆಂದು.
ಮದುವೆಗೆ ಮನೆಯವರು ಒಪ್ಪುವುದಿಲ್ಲ. ಎಲ್ಲಿಯಾದರೂ ಓಡಿಹೋಗೋಣ ಅಂದ್ರೆ ಹಣವಿಲ್ಲ ಎಂದು ಯೋಚಿಸಿದ ಪ್ರೇಮಿಗಳು ರಹಸ್ಯ ಕೋಣೆಯಲ್ಲೇ ಬಚ್ಚಿಟ್ಟುಕೊಂಡು ಲವ್ ಕಹಾನಿ ಮುಂದುವರಿಸಿದ್ದರಂತೆ. ಇತ್ತೀಚಿಗೆ ರಾತ್ರಿ ವೇಳೆ ಆಕೆಯನ್ನ ಮನೆಯಿಂದ ಹೊರ ಕರೆದೊಯ್ದು ಮದುವೆ ಮಾಡಿಕೊಂಡು ವಿಥಾನಸ್ಸೆರಿ ಗ್ರಾಮದಲ್ಲಿ ವಾಸವಿದ್ದ. ಇನ್ನು ರಹಸ್ಯ ಕೋಣೆಯ ಕಿಟಕಿ ಮೂಲಕ ಯುವತಿ ತನ್ನ ತಂದೆ-ತಾಯಿಯನ್ನ ಎರಡ್ಮೂರು ಬಾರಿ ನೋಡಿದ್ದರೂ ಮಾತನಾಡಿಸುವ ಗೋಜಿಗೆ ಹೋಗಿರಲಿಲ್ಲವಂತೆ… ಇವರಿಬ್ಬರ ಪ್ರೇಮ್ ಕಹಾನಿ ಕೇಳಿದ ಪೊಲೀಸರು ಅರೆಕ್ಷಣ ದಂಗಾಗಿದ್ದಾರೆ. (ಏಜೆನ್ಸೀಸ್)