ನ್ಯೂಸ್

ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಕೇಸ್​: ಹಳೇ ಫೋನ್​ ಕೊಡಲು ಒಪ್ಪದ ನಟ ದಿಲೀಪ್, ಅಂಥದ್ದೇನಿದೆ ಅದರಲ್ಲಿ?

ತಿರುವನಂತಪುರಂ: ಖ್ಯಾತ ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಿಯಾಗಿರುವ ಮಲಯಾಳಂ ನಟ ದಿಲೀಲ್​ ವಿಚಾರಣೆ ವೇಳೆ ತನ್ನ ಹಳೆಯ ಮೊಬೈಲ್​ ಫೋನ್​ ಕೊಡಲು ನಿರಾಕರಿಸಿದ್ದು, ನಿರ್ದೇಶಕ ಬಾಲಚಂದ್ರ ಕುಮಾರ್​ ಮತ್ತು ತನಿಖಾಧಿಕಾರಿಗಳ ನಡುವಿನ ಪಿತೂರಿ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯವನ್ನು ದಿಲೀಪ್​ ಕೋರಿದ್ದಾರೆ.

ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್​ ಅಧಿಕಾರಿಗಳನ್ನು ಕೊಲೆ ಮಾಡಿಸಲು ಸಂಚು ರೂಪಿಸಿದ ಅರೋಪವೂ ಕೂಡ ದಿಲೀಪ್​ ಅವರ ಮೇಲಿದೆ. ಈ ಬಗ್ಗೆ ಹೊಸ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಆರೋಪಿ ದಿಲೀಪ್​ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಅಧಿಕಾರಿಗಳ ಪ್ರಕಾರ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲ ಆರೋಪಿಗಳು ತಂತಮ್ಮ ಫೋನ್​ಗಳನ್ನು ಬದಲಾಯಿಸಿದ್ದು, ಹೊಸ ಫೋನ್​ಗಳನ್ನು ಖರೀದಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಸಾಕ್ಷಿಗಳನ್ನು ಮರೆಮಾಚಿರುವ ಸಂಶಯದ ಮೇರೆಗೆ ಹಳೆಯ ಫೋನ್​ಗಳನ್ನು ಸಲ್ಲಿಸುವಂತೆ ತನಿಖಾಧಿಕಾರಿಗಳು ಆರೋಪಿಗಳನ್ನು ಕೇಳಿದ್ದರು. ಆದರೆ, ದಿಲೀಪ್​ ಫೋನ್​ ಕೊಡಲು ನಿರಾಕರಿಸಿದ್ದು, ಯಾವುದೇ ದಾಖಲಾತಿಗಳನ್ನು ಸಲ್ಲಿಸುವಂತೆ ಆರೋಪಿಗಳ ಬಳಿ ಕೇಳುವಂತಿಲ್ಲ ಎಂದು ಸುಪ್ರೀಂಕೋರ್ಟ್​ ನೀಡಿರುವ ತೀರ್ಪನ್ನು ದಿಲೀಪ್​ ಉಲ್ಲೇಖಿಸಿದ್ದಾರೆಂದು ತಿಳಿದುಬಂದಿದೆ.

ಒಂದು ವೇಳೆ ತನಿಖಾಧಿಕಾರಿಗಳಿಗೆ ಹಳೆಯ ಫೋನ್​ ನೀಡಿದರೆ, ಅದರಲ್ಲಿರುವ ಕೆಲವೊಂದು ಅಂಶಗಳನ್ನಿಟ್ಟುಕೊಂಡು ಸುಳ್ಳು ಸುದ್ದಿಯನ್ನು ಸೃಷ್ಟಿ ಮಾಡುತ್ತಾರೆ. ಹೀಗಾಗಿ ನೀಡುವುದಿಲ್ಲ ಎಂದು ದಿಲೀಪ್​ ಸಮಜಾಯಿಷಿ ನೀಡಿದ್ದು, ಸದ್ದು ವಿಧಿವಿಜ್ಞಾನ ಪರೀಕ್ಷೆಗಾಗಿ ಹೊಸ ಫೋನ್​ನನ್ನು ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ. ಆದರೆ, ತನಿಖಾಧಿಕಾರಿಗಳ ಪ್ರಕಾರ ಹಳೆಯ ಫೋನ್​ನಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ತನಿಖಾಧಿಕಾರಿಗಳ ಕೊಲೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳಿವೆ ಎಂದು ಹೇಳಲಾಗಿದೆ.

ನಿರ್ದೇಶಕ ಬಾಲಚಂದ್ರ ಕುಮಾರ್​ ಒಂದು ಕಾಲದಲ್ಲಿ ದಿಲೀಪ್​ ಆಪ್ತರಲ್ಲಿ ಒಬ್ಬರಾಗಿದ್ದರು. ಬಾಲಚಂದ್ರಕುಮಾರ್ ಹೇಳಿದ ಅವಧಿಯಲ್ಲಿ ನಾನು ಬಳಸಿದ್ದ ಫೋನ್ ಈಗಾಗಲೇ ಪೊಲೀಸರ ಬಳಿ ಇದೆ ಎಂದು ದಿಲೀಪ್ ಹೇಳಿದ್ದಾರೆ. ಅಲ್ಲದೆ ತನಿಖಾಧಿಕಾರಿಗಳನ್ನು ಮೂರ್ಖರನ್ನಾಗಿಸಿರುವ ಆರೋಪದಿಂದ ನಾನು ಆಘಾತಗೊಂಡಿದ್ದೇನೆ ಎಂದು ಹೇಳಿದ್ದಾರೆ. ತನಿಖಾಧಿಕಾರಿ ಬೈಜು ಪೌಲೋಸ್ ಮತ್ತು ಬಾಲಚಂದ್ರಕುಮಾರ್ ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿ ದಿಲೀಪ್​, ಅವರ ಫೋನ್‌ಗಳನ್ನು ಪರಿಶೀಲಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ. 2016-17ರ ಅವಧಿಯಲ್ಲಿ ಬಾಲಚಂದ್ರಕುಮಾರ್ ಬಳಸಿರುವ ಫೋನ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಅಂದಹಾಗೆ ದೌರ್ಜನ್ಯಕ್ಕೆ ಒಳಗಾದ ನಟಿ ಸಾಮಾನ್ಯ ನಟಿಯೇನಲ್ಲ. ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡದಲ್ಲಿ ಸಾಕಷ್ಟು ಸಿನಿಮಾ ಮಾಡಿರುವ ಬಹುಭಾಷಾ ನಟಿ. ಐದು ವರ್ಷಗಳ ಹಿಂದೆ ಶೂಟಿಂಗ್​ ಮುಗಿಸಿ ಕಾರಿನಲ್ಲಿ ಹಿಂದಿರುಗುವಾಗ ಕಿಡಿಗೇಡಿಗಳ ಗುಂಪೊಂದು ಅವರನ್ನು ಅಪಹರಿಸಿ, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಹೇಳಲಾಗಿದೆ. ಇದೇ ಪ್ರಕರಣದಲ್ಲಿ ತದನಂತರದಲ್ಲಿ ಮಲಯಾಳಂ ನಟ ದಿಲೀಪ್​ರನ್ನು ಬಂಧಿಸಲಾಗಿತ್ತು. ಸದ್ಯ ಜಾಮೀನಿನ ಮೇಲೆ ಹೊರಗಡೆ ಇದ್ದು, ಇದೀಗ ಈ ತನಿಖಾಧಿಕಾರಿಗಳ ಕೊಲೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು, ಮತ್ತಷ್ಟು ಸ್ಫೋಟಕ ಸಂಗತಿಗಳು ಹೊರಬರುತ್ತಿವೆ. (ಏಜೆನ್ಸೀಸ್​)