ನ್ಯೂಸ್

ಬಾಲಿವುಡ್​ ಬ್ಯೂಟಿ ಕತ್ರಿನಾ ಕೈಫ್​ ಹೆಸರೇಳಿ ರಾಜ್ಯದ ಜನತೆಗೆ ಸಚಿವರು ಕೊಟ್ಟ ಭರವಸೆ ಹೇಳಿಕೆ ವೈರಲ್​!

ಜೈಪುರ: ರಾಜಸ್ಥಾನ ಸಚಿವ ಸಂಪುಟದಲ್ಲಿ ಇತ್ತೀಚೆಗಷ್ಟೇ ಸ್ಥಾನ ಪಡೆದ ರಾಜೇಂದ್ರ ಸಿಂಗ್​ ಗೌಡ ಅವರು ನೀಡಿರುವ ಹೇಳಿಕೆಯೊಂದು ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ಪಂಚಾಯತ್​ ರಾಜ್​ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ರಾಜೇಂದ್ರ ಸಿಂಗ್​ ಗೌಡ, ಬಾಲಿವುಡ್​ ಬ್ಯೂಟಿ ಕತ್ರಿನಾ ಕೈಫ್​ ಅವರ ಕೆನ್ನೆಯಷ್ಟು ಸೊಗಸಾದ ರಸ್ತೆಗಳನ್ನು ಮಾಡಿಸುತ್ತೇನೆಂದು ಭರವಸೆ ನೀಡಿದ್ದಾರೆ.

ರಾಜಸ್ಥಾನದ ಜಂಜುನು ಜಿಲ್ಲೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುವ ವೇಳೆ ಸಚಿವರು ಈ ಭರವಸೆಯನ್ನು ನೀಡಿದ್ದಾರೆ. ಗೌಡ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್​ಪಿಯಲ್ಲಿ ಟಿಕೆಟ್​ ಪಡೆದು ಜಯ ಸಾಧಿಸಿ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ.

ಇನ್ನು ರಾಜಕಾರಣಿಗಳ ರಸ್ತೆಗಳನ್ನು ಸೆಲೆಬ್ರಿಟಿಗಳ ಕೆನ್ನಗೆ ಹೋಲಿಸಿ ಮಾತನಾಡುವುದು ಇದೇ ಮೊದಲೇನಲ್ಲ. 2015ರಲ್ಲಿ ಆರ್​ಜೆಡಿ ನಾಯಕ ಲಾಲು ಪ್ರಸಾದ್​ ಯಾದವ್​ ಹೇಮಾಮಾಲಿನಿ ಕೆನ್ನೆಯಂತ ನಯವಾದ ರಸ್ತೆಗಳನ್ನು ಮಾಡಿಸುವ ಭರವಸೆ ನೀಡಿದ್ದರು.

ಮಧ್ಯಪ್ರದೇಶದ ಕಾನೂನು ಸಚಿವ ಪಿ.ಸಿ. ಶರ್ಮಾ ಕೂಡ 2019ರಲ್ಲಿ ಇದೇ ರೀತಿಯ ಹೇಳಿಕೆ ನೀಡಿದ್ದರು. ರಾಜ್ಯದ ಗುಂಡಿಯುಕ್ತ ರಸ್ತೆಗಳು ಕನಸಿನ ಹುಡುಗಿಯ ಕೆನ್ನೆಯ ರೀತಿ ಬದಲಾಗಲಿದೆ ಎಂದು ಭರವಸೆ ನೀಡಿದ್ದರು. 2013ರಲ್ಲಿ ಉತ್ತರ ಪ್ರದೇಶದ ಖಾದಿ ಮತ್ತು ಗ್ರಾಮೀಣ ಕೈಗಾರಿಕೆ ಸಚಿವ ರಾಜಾರಾಮ್​ ಪಾಂಡೆ ಮಾತನಾಡಿ, ಪ್ರತಾಪಗಢ ಜಿಲ್ಲೆಯಲ್ಲಿರುವ ರಸ್ತೆಗಳನ್ನು ಹೇಮಾಮಾಲಿನಿ ಮತ್ತು ಮಾಧುರಿ ದೀಕ್ಷಿತ್​ ಗಲ್ಲದಂತೆ ಸೊಗಸಾಗಿ ಮಾಡಲಾಗುವುದು ಎಂದಿದ್ದರು. ಆದರೆ, ರಾಜಕಾರಣಿಗಳು ನೀಡಿದ ಭರವಸೆ ಮಾತ್ರ ಇಂದಿಗೂ ಭರವಸೆ ಆಗಿಯೇ ಉಳಿದಿವೆ. (ಏಜೆನ್ಸೀಸ್​)