ನ್ಯೂಸ್

ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಪರೀಕ್ಷೆ ಬರೆಯಲು ತೆರಳುತ್ತಿದ್ದ ಐವರು ವಿದ್ಯಾರ್ಥಿಗಳು ಸೇರಿ 6 ಸಾವು

ಜೈಪುರ: ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಓರ್ವ ಚಾಲಕ ಮತ್ತು 5 ವಿದ್ಯಾರ್ಥಿಗಳು ಸೇರಿ ಒಟ್ಟು 6 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ರಾಜಸ್ಥಾನ ರಾಜಧಾನಿ ಜೈಪುರದ ಬಳಿಯ ದೆಹಲಿ-ಜೈಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.

ಪರೀಕ್ಷೆ ಬರೆಯಲು ತೆರಳುವಾಗ ನಿಂತಿದ್ದ ಲಾರಿಗೆ ವೇಗವಾಗಿ ಬಂದು ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಆರು ಮಂದಿಯು ಸ್ಥಳದಲ್ಲೇ ಸಾವಿಗೀಡಾಗಿದ್ದು, ಕೆಲವರು ಗಾಯಗೊಂಡಿದ್ದಾರೆ.

ಸ್ಥಳಕ್ಕೆ ಜೈಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತರ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಘಟನೆ ಸಂಬಂಧ ದೂರು ದಾಖಲಾಗಿದ್ದು, ತನಿಖೆಯು ಆರಂಭವಾಗಿದೆ.

ಆದಾಗ್ಯೂ, ಅತೀ ವೇಗ, ನಿರ್ಲಕ್ಷ್ಯ ಮತ್ತು ಕುಡಿದು ಚಾಲನೆ ಮಾಡುವುದು ಸೇರಿ ವಿವಿಧ ಅಂಶಗಳಿಂದ ಭಾರತದಲ್ಲಿ ರಸ್ತೆ ಅಪಘಾತಗಳು ಉಂಟಾಗುತ್ತವೆ. ಈ ಅಪಘಾತಗಳು ಸಂತ್ರಸ್ತರ ಕುಟುಂಬಗಳ ಮೇಲೆ ಶಾಶ್ವತ ಪ್ರಭಾವ ಬೀರುತ್ತವೆ. ಭಾರತದಲ್ಲಿ ರಸ್ತೆ ಅಪಘಾತಗಳಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ ಎಂದು ಅಂಕಿ-ಅಂಶಗಳು ತೋರಿಸುತ್ತವೆ. ವೇಗದ ಚಾಲನೆ, ಹೆಲ್ಮೆಟ್ ಕೊರತೆಯಂತಹ ಹಲವಾರು ಕಾರಣಗಳಿಂದ ಅನೇಕ ಜನರು ರಸ್ತೆ ಅಪಘಾತಗಳಲ್ಲಿ ತಮ್ಮ ಜೀವಗಳನ್ನು ಕಳೆದುಕೊಳ್ಳುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಅಪಘಾತದಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಪ್ರತಿದಿನ ದೇಶದಲ್ಲಿ ಸರಾಸರಿ 1230 ಅಪಘಾತಗಳು ನಡೆದರೆ, ಸುಮಾರು 414 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪ್ರತಿ ಗಂಟೆಗೆ ದೇಶದಲ್ಲಿ 51 ಅಪಘಾತಗಳು ಸಂಭವಿಸುತ್ತಲೇ ಇವೆ. ಕೇವಲ ಒಂದು ಗಂಟೆ ಸಮಯದಲ್ಲಿ 17 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ ಎಂದು ಅಂಕಿ-ಅಂಶಗಳು ತೋರಿಸಿವೆ. (ಏಜೆನ್ಸೀಸ್​)