ಕಾಬೂಲ್: ಅಫ್ಘಾನಿಸ್ತಾನದ ಕಾಂದಹಾರ್ ನಗರದ ಸ್ಪಿನ್ ಬೊಲ್ಡಕ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಘರ್ಷಣೆಯಲ್ಲಿ ಭಾರತೀಯ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕ್ ಅವರ ಹತ್ಯೆಯಾಗಿದೆ.
ಡ್ಯಾನಿಶ್ ಸಿದ್ದಿಕ್ ಅವರು ಪ್ರತಿಷ್ಟಿತ ಪುಲಿಟ್ಜರ್ ಪ್ರಶಸ್ತಿ ವಿಜೇತರಾಗಿದ್ದಾರೆ. ಮಾಧ್ಯಮ ವರದಿಗಾರರಾಗಿ ವೃತ್ತಿ ಜೀವನ ಆರಂಭಿಸಿದ ಸಿದ್ದಿಕ್, ನಂತರದಲ್ಲಿ ಫೋಟೋ ಜರ್ನಲಿಸಂ ಕಡೆ ವಾಲಿದರು. ಪ್ರಸ್ತುತ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್ನ ಫೋಟೋ ಜರ್ನಲಿಸ್ಟ್ ಆಗಿದ್ದರು. ಅವರು 2008 ರಿಂದ 2010ರವರೆಗೆ ಇಂಡಿಯಾ ಟುಡೆ ಗ್ರೂಪ್ನ ವರದಿಗಾರರಾಗಿ ಕೆಲಸ ಮಾಡಿದ್ದಾರೆ.
ಫೋಟೋ ಜರ್ನಲಿಸ್ಟ್ ಆಗಿ ಸಿದ್ದಿಕ್ ಅವರು ಜಗತ್ತಿನ ಅನೇಕ ಸಮಸ್ಯೆಗಳನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದಿದ್ದಾರೆ. ಅಫ್ಘಾನಿಸ್ತಾನ ಮತ್ತು ಇರಾಕ್, ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟು, ಹಾಂಗ್ಕಾಂಗ್ ಪ್ರತಿಭಟನೆ ಮತ್ತು ನೇಪಾಳ ಭೂಕಂಪ ಮುಂತಾದ ಪ್ರಮುಖ ಘಟನೆಗಳನ್ನು ಸರೆಹಿಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಕಳೆದ ಕೆಲವು ದಿನಗಳಿಂದ ಸಿದ್ದಿಕ್ ಅವರು ಅಫ್ಘಾನಿಸ್ತಾನದ ಕಾಂದಾಹಾರ್ನಲ್ಲಿ ನೆಲೆಸಿದ್ದರು. ಅಮೆರಿಕ ಸೇನೆಯು ಅಫ್ಘಾನಿಸ್ತಾನದಿಂದ ಹಿಂದೆ ಸರಿಯುತ್ತಿದ್ದಂತೆ ತಾಲಿಬಾನ್ ಉಗ್ರ ಸಂಘಟನೆ ಪೂರ್ತಿ ದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಾರಂಭಿಸಿದ್ದು, ಇದರಿಂದ ಆಫ್ಘಾನ್ ದೇಶದ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಅದರಲ್ಲೂ ಕಾಂದಾಹಾರ್ನಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಸಿದ್ದಿಕ್ ಅವರು ಕೆಲವು ಕಾರ್ಯಾಚರಣೆಗಳಲ್ಲಿ ಆಫ್ಘಾನ್ ವಿಶೇಷ ಪಡೆಯೊಂದಿಗೆ ಸೇರಿ ಕೆಸಲ ಮಾಡುತ್ತಿದ್ದರು.
ಜೂನ್ 13ರಂದು ಟ್ವೀಟ್ ಮಾಡಿದ್ದ ಸಿದ್ದಿಕ್, ತಾವು ಮತ್ತು ಇತರೆ ವಿಶೇಷ ಪಡೆಗಳು ಪ್ರಯಾಣಿಸುತ್ತಿದ್ದ ವಾಹನಗಳ ಮೇಲೆ 3 ಆರ್ಪಿಜಿ ರೌಂಡ್ಸ್ ಮತ್ತು ಇತರೆ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಲಾಗಿತ್ತು. ಅದೃಷ್ಟವಶಾತ್ ನನಗೇನು ಆಗಲಿಲ್ಲ ಮತ್ತು ಆರ್ಮರ್ ಪ್ಲೇಟ್ ಮೇಲೆ ರಾಕೆಟ್ ದಾಳಿ ಮಾಡುವ ದೃಶ್ಯ ಸೆರೆಯುವ ಅದೃಷ್ಟಶಾಲಿಯಾಗಿದ್ದೆ ಎಂದು ಹೇಳಿದ್ದರು.
ಇದೀಗ ಸಿದ್ದಿಕ್ ಅವರು ತಾಲಿಬಾನ್ ದಾಳಿಯಿಂದಲೇ ಪ್ರಾಣ ಬಿಟ್ಟಿದ್ದಾರೆ. ಅಮೆರಿಕ ಸೇನೆ ಹಿಂದಕ್ಕೆ ಸರಿಯುತ್ತಿದ್ದಂತೆ ತಾಲಿಬಾನ್ ಮತ್ತು ಆಫ್ಘಾನ್ ಸರ್ಕಾರದ ಸೇನಾ ಪಡೆಗಳ ನಡುವೆ ಘರ್ಷಣೆ ಉಂಟಾಗಿದೆ. ಈಗಾಗಲೇ ತಾಲಿಬಾನ್ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಗಡಿಯನ್ನು ದಾಟಿ ಅನೇಕ ಜಿಲ್ಲೆಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿವೆ.
ದೇಶದ 34 ಪ್ರಾಂತ್ಯಗಳಲ್ಲಿ 29 ಪ್ರಾಂತ್ಯಗಳಲ್ಲಿನ ಸರ್ಕಾರಿ ಕಟ್ಟಡಗಳನ್ನು ತಾಲಿಬಾನ್ ಧ್ವಂಸ ಮಾಡಿದೆ ಎಂದು ಆಫ್ಘಾನ್ ಸರ್ಕಾರ ಆರೋಪಿಸಿದೆ. ಆದರೆ, ತಾಲಿಬಾನ್ ಇದನ್ನು ನಿರಾಕರಿಸಿದ್ದು, ಆಫ್ಘಾನ್ ಕಡೆಯೇ ಬೊಟ್ಟು ಮಾಡಿದೆ. ಇದರ ನಡುವೆ ಆಫ್ಘಾನ್ನ ಹಿರಿಯ ಸರ್ಕಾರ ಅಧಿಕಾರಿ ನಾದರ್ ನಾದೆರಿ ಅವರು ಕಾಬೂಲ್ನಲ್ಲಿ ಮಾತನಾಡಿ, ತಾಲಿಬಾನ್ ಹೋರಾಟಗಾರರನ್ನು ಹಿಂದೆ ಸರಿಯುವಂತೆ ಮಾಡಲು ಮತ್ತು 190 ಜಿಲ್ಲೆಗಳ ಮೇಲಿನ ನಿಯಂತ್ರಣವನ್ನು ಮರಳಿ ಪಡೆಯಲು ನಮ್ಮ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಹೇಳಿದ್ದಾರೆ.
ಇನ್ನು ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯು ಹೊಸ ಅಫ್ಘಾನ್ ನಿರಾಶ್ರಿತರ ಬಿಕ್ಕಟ್ಟಿನ ಭೀತಿಯನ್ನು ಹುಟ್ಟುಹಾಕಿದೆ. ಅಧ್ಯಕ್ಷ ಅಶ್ರಫ್ ಘನಿ ಗುರುವಾರ ಉಜ್ಬೇಕಿಸ್ತಾನ್‌ನಲ್ಲಿ ಪ್ರಾದೇಶಿಕ ಮುಖಂಡರನ್ನು ಭೇಟಿಯಾಗಿದ್ದಾರೆ. ಇನ್ನೊಂದೆಡೆ ಪರಿಹಾರಗಳನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಅಫ್ಘಾನ್ ಹಿರಿಯ ನಾಯಕರ ಸಮಾವೇಶವನ್ನು ಆಯೋಜಿಸುವುದಾಗಿ ಪಾಕಿಸ್ತಾನ ಹೇಳಿದೆ. (ಏಜೆನ್ಸೀಸ್)