ಹೈದರಾಬಾದ್: ವಯಸ್ಸಿನಲ್ಲಿ ತನಗಿಂತ ಕಿರಿಯವನಾದ ಯುವಕ ಪರಿಚಯವು ಮಹಿಳೆಯೊಬ್ಬಳ ವೈವಾಹಿಕ ಬದುಕಲ್ಲಿ ಬಿರುಗಾಳಿ ಎಬ್ಬಿಸಿದ್ದು, ಮೂವರು ಹೆಣ್ಣು ಮಕ್ಕಳ ಜತೆ ಮಹಿಳೆಯು ಕಣ್ಮರೆಯಾಗಿರುವು ಹೈದರಾಬಾದ್ನಲ್ಲಿ ಭಾರೀ ಸುದ್ದಿಯಾಗಿದೆ.
ಕಿಶನ್ ಶರ್ಮಾ ಮತ್ತು ಪೂಜಾ ಅಲಿಯಾಸ್ ರಾಗಿಣಿ (34) ದಂಪತಿ ಹೈದರಾಬಾದ್ನ ಕಾಮಾಟಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮುರಳಿಗುಮ್ಮಾಸ್ ಏರಿಯಾದ ನಿವಾಸಿಗಳು. ಇಬ್ಬರು 16 ವರ್ಷದ ಹಿಂದೆ ಮದುವೆಯಾಗಿದ್ದು, ಮೂವರು ಹೆಣ್ಣು ಮಕ್ಕಳಿದ್ದಾರೆ.
ಪೂಜಾ ಕುಟುಂಬ ಮಲಕ್ಪೇಟೆಯಲ್ಲಿ ನೆಲೆಸಿದ್ದಾಗ ಅವರ ಮನೆಯ ಎದುರು ವಾಸವಿದ್ದ ಪವನ್ (30) ಎಂಬಾತನ ಪರಿಚಯ ಆಗಿರುತ್ತದೆ. ಇಬ್ಬರು ಆಗಾಗ ಫೋನ್ನಲ್ಲಿ ಮಾತನಾಡುವುದು ಸಾಮಾನ್ಯವಾಗಿರುತ್ತದೆ. ಇದು ಕಿಶನ್ಗೆ ತಿಳಿದು, ದಂಪತಿ ನಡುವಿನ ವಿರಸಕ್ಕೆ ಕಾರಣವಾಗಿ, ಆಗಾಗ ಜಗಳಗಳಾಗುತ್ತಿರುತ್ತವೆ.
ಇಲ್ಲೇ ಉಳಿದುಕೊಂಡರೆ ಒಳ್ಳೆಯದಲ್ಲ ಎಂಬ ನಿರ್ಧಾರಕ್ಕೆ ಬರುವ ಕಿಶನ್, ಮಲಕ್ಪೇಟೆಯಿಂದ ಕಾಮಾಟಿಪುರ ಮುರಳಿಗುಮ್ಮಾಸ್ ಏರಿಯಾಗಿ 8 ತಿಂಗಳ ಹಿಂದೆ ಸ್ಥಳಾಂತರಗೊಂಡಿರುತ್ತಾರೆ. ಆದರೆ, ಮನೆ ಬದಲಾದರೂ ಪೂಜಾಳ ಮನಸ್ಸು ಮಾತ್ರ ಬದಲಾಗಲೇ ಇಲ್ಲ. ಪವನ್ ಜನತೆ ಮಾತನಾಡುವುದನ್ನು ಮುಂದುವರಿಸುತ್ತಾಳೆ. ಇದರ ನಡುವೆ ಇತ್ತೀಚೆಗಷ್ಟೇ ಪವನ್ ಕೂಡ ಮುರುಳಿಗುಮ್ಮಾಸ್ಗೆ ಸ್ಥಾಳಾಂತರವಾಗುತ್ತಾನೆ. ಇದು ಕೂಡ ಕಿಶನ್ ಗಮನಕ್ಕೆ ಬರುತ್ತದೆ. ಇಬ್ಬರ ನಡುವೆ ಮತ್ತೆ ಜಗಳವಾಗುತ್ತದೆ.
ಹೀಗಿರುವಾಗ ಪೂಜಾ ತನ್ನ ಹೆಣ್ಣು ಮಕ್ಕಳಾದ ಕೀರ್ತಿ (17), ಮೋಹಿನಿ ಅಲಿಯಾಸ್ ಮೀನಾ (14) ಮತ್ತು ಗೋಪಿ (12) ಜತೆ ಜುಲೈ 16ರಂದು ತಿರುಪತಿಗೆಂದು ತೆರಳುತ್ತಾರೆ. ಆದರೆ, ಮತ್ತೆ ಹಿಂದಿರುವುದೇ ಇಲ್ಲ. ಇದರಿಂದ ಗಾಬರಿಗೆ ಒಳಗಾಗುವ ಕಿಶನ್ ಕಾಮಾಟಿಪುರ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸುತ್ತಾರೆ. ಪವನ್ ಜತೆ ಓಡಿ ಹೋಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)