ನ್ಯೂಸ್

ಪಬ್ಲಿಕ್​ ಟಾಯ್ಲೆಟ್​ ಅನ್ನೇ ಕದ್ದ ಆಟೋ ಚಾಲಕ! ಮಾರಾಟದ ಮೊತ್ತ ಕೇಳಿದ್ರೆ ಶಾಕ್​ ಆಗ್ತೀರಾ

ಹೈದರಾಬಾದ್​: ಹೀಗೂ ಉಂಟೇ ಎನ್ನುವಂತಹ ಘಟನೆಯೊಂದು ಹೈದರಾಬಾದ್​ನಲ್ಲಿ ನಡೆದಿದೆ. 36 ವರ್ಷದ ಆಟೋ ಟ್ರಾಲಿ ಚಾಲಕನೊಬ್ಬ ಸುಲಭವಾಗಿ ಸಾಗಿಸಬಹುದಾದಂತಹ ಸಾರ್ವಜನಿಕ ಟಾಯ್ಲೆಟ್​ ಅನ್ನು ಕದ್ದು ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾನೆ.

ಚಾಲಕನನ್ನು ಎಂ. ಜೋಗಯ್ಯ ಎಂದು ಗುರುತಿಸಲಾಗಿದೆ. ಮೇದಕ್​ ಜಿಲ್ಲೆಯ ದೊಮಲಗುಡ ಮೂಲದ ಆರೋಪಿ ಚಾಲಕನನ್ನು ಮಲ್ಕಜ್​ಗಿರಿ ಪೊಲೀಸರು ಮಾರ್ಚ್​ 21ರ ಸೋಮವಾರದಂದು ಬಂಧಿಸಿದ್ದಾರೆ. ಆರೋಪಿ ಜೋಗಯ್ಯ, ತನ್ನ ಇಬ್ಬರು ಸಹಚರರಾದ ಬುದ್ಧ ಭವನದ ಜಿಎಚ್‌ಎಂಸಿ ಕಾರ್ಯಕರ್ತ ಅರುಣ್ ಕುಮಾರ್ ಮತ್ತು ಮಲ್ಕಾಜ್‌ಗಿರಿಯ ಆನಂದಬಾಗ್‌ನಲ್ಲಿರುವ ಜೈನ್ ಕನ್‌ಸ್ಟ್ರಕ್ಷನ್‌ನ ಬಿಕ್ಷಪತಿ ಎಂಬುವರ ಜತೆ ಸೇರಿ ಸಾರ್ವಜನಿಕ ಆಸ್ತಿಯನ್ನು ಕದ್ದು ಪರಾರಿಯಾಗಿದ್ದರು.

ಇದಾದ ಬಳಿಕ ಟಾಯ್ಲೆಟ್​ ಅನ್ನು 45 ಸಾವಿರಕ್ಕೆ ಮುಶೀರಾಬಾದ್​ನಲ್ಲಿರುವ ಗುಜರಿ ವ್ಯಾಪಾರಿಗೆ ಮಾರಾಟ ಮಾಡಿದ್ದರು. ಹಣವನ್ನು ತನ್ನ ವೈಯಕ್ತಿಕ ಖರ್ಚಿಗಾಗಿ ಜೋಗಯ್ಯ ಇಟ್ಟುಕೊಂಡಿದ್ದ. ಸ್ಥಳೀಯರ ದೂರಿನ ಆಧಾರದ ಮೇಲೆ ಜಿಎಂಎಚ್​ಸಿ ಉಪ ಪೊಲೀಸ್​ ಆಯುಕ್ತ ಜಿ. ರಾಜು ಅವರು ಪ್ರಕರಣ ದಾಖಲಿಸಿಕೊಂಡು, ಸಿಸಿಟಿವಿ ಕ್ಯಾಮೆರಾಗಳ ನೆರವಿನಿಂದ ಜೋಗಯ್ಯನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಹಣವನ್ನು ವಶಕ್ಕೆ ಪಡೆದು, ಆಟೋ ಟ್ರಾಲಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದೀಗ ತಲೆಮರೆಸಿಕೊಂಡಿರುವ ಆರೋಪಿ ಜೋಗಯ್ಯನ ಮತ್ತಿಬ್ಬರು ಸಹಚರರಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. (ಏಜೆನ್ಸೀಸ್​)